ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ-ಡಾ. ವಿಜಯಮಹಾಂತೇಶ

| Published : Sep 22 2024, 01:56 AM IST

ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ-ಡಾ. ವಿಜಯಮಹಾಂತೇಶ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಸೆ.೨೪ರಿಂದ ಹಮ್ಮಿಕೊಳ್ಳಲಾದ ತಂಬಾಕು ಮುಕ್ತ ಯುವ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.

ಹಾವೇರಿ: ಜಿಲ್ಲೆಯಲ್ಲಿ ಸೆ.೨೪ರಿಂದ ಹಮ್ಮಿಕೊಳ್ಳಲಾದ ತಂಬಾಕು ಮುಕ್ತ ಯುವ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ತಂಬಾಕು ಮುಕ್ತ ಯುವ ಅಭಿಯಾನ ೨.೦ ಕಾರ್ಯಕ್ರಮದ ಅನುಷ್ಠಾನ ಕುರಿತ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸ್ ನಿಲ್ದಾಣ, ಆಸ್ಪತ್ರೆಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಕಾರ್ಯಕ್ರಮ ಆಯೋಜನೆ ಮೂಲಕ ಧೂಮಪಾನ ಹಾಗೂ ಗುಟಕಾ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.ಜಿಲ್ಲೆಯ ವಿವಿಧ ೬೦ ಶಾಲೆಗಳಲ್ಲಿ ೬೦ ದಿನಗಳ ಕಾಲ ನಿರಂತರ ಪ್ರಭಾತಪೇರಿ ಮೂಲಕ ಸಾರ್ವಜನಿಕರಿಗೆ “ಕೋಟ್ಪಾ ಕಾಯ್ದೆ-೨೦೦೩” ಮತ್ತು “ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಕುರಿತು ಜಾಗೃತಿ ಮೂಡಿಸಬೇಕು. ತಂಬಾಕು ಮುಕ್ತ ಗ್ರಾಮ, ತಂಬಾಕು ಮುಕ್ತ ಕಚೇರಿ ಹಾಗೂ ತಂಬಾಕು ಮುಕ್ತ ಶಾಲೆ ಘೋಷಣೆ ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಕಂಡುಬಂದಲ್ಲಿ ದಂಡವಿಧಿಸಬೇಕು. ಸಾರ್ವಜನಿಕ ಸ್ಥಳಗಳಿಗೆ ಅನಿರೀಕ್ಷಿತ ದಾಳಿ ನಡೆಸಬೇಕು. ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಡಾ. ಸಂತೋಷ ದಡ್ಡಿ ಮಾತನಾಡಿ, ತಂಬಾಕು ಮುಕ್ತ ಯುವ ಅಭಿಯಾನ ೨.೦”ವನ್ನು ಸೆ.೨೪ ರಿಂದ ನ.೨೩ರವರೆಗೆ ಹಮ್ಮಿಕೊಳ್ಳಲಾಗಿದೆ. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಲಾ-ಕಾಲೇಜು, ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲು ಯೋಜಿಸಲಾಗಿದೆ ಎಂದು ಕಾರ್ಯಕ್ರಮದ ರೂಪರೇಷೆ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಮೇಶಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ, ಡಾ. ಜಗದೀಶ ಪಾಟೀಲ, ಹಾವೇರಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಸೇರಿದಂತೆ ವಿವಿಧ ತಾಲೂಕುಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.