ಸಾರಾಂಶ
ಹುಬ್ಬಳ್ಳಿ:
ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬು, ಮೀನಿನ ಎಣ್ಣೆ ಇತ್ಯಾದಿ ವಸ್ತುಗಳು ಪತ್ತೆಯಾಗಿರುವುದು ಆತಂಕಕಾರಿ. ಇದರಲ್ಲಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ ಎಂದು ಲ್ಯಾಬ್ ವರದಿ ವಿವರಿಸಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಹೀಗಾಗಿ ಇದು ಸತ್ಯವಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು ಎಂದರು.
ನಂದಿನಿ ತುಪ್ಪ ಬಂದ್ ಮಾಡಿಸಿದ ನಂತರ ಈತರಹ ವಸ್ತುಗಳನ್ನು ಖರೀದಿ ಮಾಡಿ ಲಡ್ಡು ತಯಾರಿಸಲಾಗಿದೆ. ಹಿಂದಿನ ಆಂಧ್ರಪ್ರದೇಶ ಸರ್ಕಾರ ಹಾಗೂ ಕಾಂಗ್ರೆಸ್‌ನವರ ಹಿಂದೂ ವಿರೋಧಿ ನೀತಿಯಿಂದ ಈ ರೀತಿ ಆಗುತ್ತಿದೆ. ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರು ಈ ರೀತಿ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಪ್ರಸಾದ ವಿತರಣೆಯಲ್ಲಿ ಆಯಾ ಸರ್ಕಾರಗಳು ಮೂಗು ತೂರಿಸದೇ ದೇವಸ್ಥಾನ ಆಡಳಿತ ಮಂಡಳಿಯವರು ನಿರ್ಧಾರ ಮಾಡಬೇಕು ಮತ್ತು ಪರಿಶೀಲಿಸಬೇಕು. ದೇಶದ ನಂಬಿಕೆ, ಸಂಸ್ಕೃತಿ, ಶ್ರದ್ಧೆ ಪ್ರಶ್ನೆ ಹಾಳು ಮಾಡಬಾರದು ಎಂದರು.
ಮೊಹಬತ್ ಕಾ ದುಖಾನ್ ಎನ್ನುವ ಕಾಂಗ್ರೆಸ್‌ನ ರಾಹುಲ್ ಗಾಂಧಿ, ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡಲು ಹಚ್ಚಿದ್ದಾರೆ. ಸಂವಿಧಾನ ವಿರೋಧಿ ನಡುವಳಿಕೆ ಮುಂದುವರಿಸಿದ್ದಾರೆ. ಸಿಖ್ ಸಹೋದರರನ್ನು ಅಪಮಾನ ಮಾಡಿದ್ದಾರೆ. ವಿದೇಶದ ನೆಲದಲ್ಲಿ ಬಹುಸಂಸ್ಕೃತಿಯ ನಾಡಾದ ಭಾರತದ ಮಾನವನ್ನು ಹರಾಜು ಮಾಡಿದ್ದಾರೆ ಎಂದು ಜೋಶಿ ಕಿಡಿಕಾರಿದರು.ತುಷ್ಟೀಕರಣ:
ಗಣೇಶನ ಮೆರವಣಿಗೆ ಮಾಡಿದವರ ಮೇಲೆ ಎಫ್‌ಐಆರ್ ಹಾಕಲಾಗುತ್ತಿದೆ. ನೋಡಲು ಹೋದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಆರ್. ಅಶೋಕ ಅವರ ಮೇಲೂ ಎಫ್‌ಐಆರ್ ದಾಖಲಾಗಿದೆ. ಮಸೀದಿ ಬಂದರೆ ಗಣೇಶ ಹಾಡು ಬಂದ್ ಮಾಡಬೇಕಂತೆ, ಹಾಗಾದರೆ ಗಣೇಶ ಹೋದರೆ ಮುಸ್ಲಿಮರು ನಮಾಜ್ ಬಂದ್ ಮಾಡುತ್ತಾರೆಯೇ? ಎಂದು ಸಚಿವರು ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರ ತುಷ್ಟೀಕರಣ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.ಶಾಸಕ ಮುನಿರತ್ನ ಮೇಲೆ ಆರೋಪಗಳಿವೆ. ಸರಿಯಾಗಿ ತನಿಖೆ ಮಾಡಬೇಕು. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿದೆ. ಆದರೆ, 2020ರ ಪ್ರಕರಣ ಈಗ ಮುನ್ನೆಲೆಗೆ ಬಂದಿದ್ದು ಏಕೆ?. ರಾಜ್ಯ ಸರ್ಕಾರದ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದರು.
ಸ್ಮಶಾನ ಭೂಮಿ ಆಗಿದ್ದರೆ ಇಂದಿರಾ ಕ್ಯಾಂಟಿನ್ ಬೇರೆ ಕಡೆ ಮಾಡಬೇಕು. ಸೌಹಾರ್ದತೆಯುವಾಗಿ ಶಾಸಕರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಬಗೆಹರಿಸಬೇಕು ಎಂದು ಹುಬ್ಬಳ್ಳಿ ಇಂದಿರಾ ಕ್ಯಾಂಟೀನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಪಾಲಿಕೆ ಸಿಬ್ಬಂದಿಗೆ ಪಗಾರ ಕೊಡಲು ಆಗುತ್ತಿಲ್ಲ. ಡಿ ದರ್ಜೆ ಮತ್ತು ಬಡವರಿಗೆ ಸಂಬಳ ಕೊಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.