ಸಾರಾಂಶ
ನರೇಗಾ ಕಾರ್ಮಿಕ ಆಯವ್ಯಯ ತಯಾರಿಕೆ ಕುರಿತು ತರಬೇತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಯಲಬುರ್ಗಾ೨೦೨೫-೨೬ನೇ ಆರ್ಥಿಕ ಸಾಲಿನ ನರೇಗಾ ಕ್ರಿಯಾಯೋಜನೆಯನ್ನು ಸಾಫ್ಟ್‌ವೇರ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಮಹಾಂತಸ್ವಾಮಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಯಲಬುರ್ಗಾ/ಕುಕನೂರು ತಾಲೂಕಿನ ಅನುಷ್ಠಾನ ಇಲಾಖೆ ಅಧಿಕಾರಿಗಳು, ಎಲ್ಲ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗೆ ೨೦೨೫-೨೬ನೇ ಸಾಲಿನ ನರೇಗಾ ಕಾರ್ಮಿಕ ಆಯವ್ಯಯ ತಯಾರಿಕೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೋಂಡು ಮಾತನಾಡಿದರು.ಕೇಂದ್ರ ಸರ್ಕಾರದ ಪ್ರಧಾನ ವಾರ್ಷಿಕ ನರೇಗಾ ಸುತ್ತೋಲೆ ಪ್ರಕಾರ ಕಾಮಗಾರಿಗಳನ್ನು ಆಯ್ಕೆ ಮಾಡಬೇಕು. ನರೇಗಾ ಸಿಬ್ಬಂದಿ, ಅನುಮೋದಿಸಿದ ಕಾಮಗಾರಿಗಳ ಕ್ಷೇತ್ರ ಭೇಟಿ ಮಾಡಿ ಪರಿಶೀಲಿಸಬೇಕು. ನಂತರ ಅಂದಾಜು ಪತ್ರಿಕೆ ತಯಾರಿಸಿ, ಕ್ರಿಯಾಯೋಜನೆ ಸಿದ್ಧಪಡಿಸಿ ತಾಪಂ ಕಾರ್ಯಾಲಯಕ್ಕೆ ತಂತ್ರಾಂಶ ಮೂಲಕ ಮಾಹಿತಿ ಸಲ್ಲಿಸಬೇಕು. ನರೇಗಾ ಯೋಜನೆಯ ಕೃಷಿ, ಜೀವನೋಪಾಯ ಮತ್ತು ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ಕಾಮಗಾರಿಗಳು ಮಾಡಿಕೊಳ್ಳುವಂತಹ ಕಾಮಗಾರಿಗಳ ಬಗ್ಗೆ ಮಾಹಿತಿ ಒದಗಿಸಬೇಕು. ನಾನಾ ಅನುಷ್ಠಾನ ಇಲಾಖೆಗಳು ಹೆಚ್ಚಿನ ಮಟ್ಟದಲ್ಲಿ ಕಾಮಗಾರಿಗಳನ್ನು ಅನುಷ್ಠಾನ ಮಾಡಿದಾಗ ಎಲ್ಲ ಯೋಜನೆಗಳು ರೈತರ ಫಲಾನುಭವಿಗಳ ಮನೆ ಬಾಗಿಲಿಗೆ ಮುಟ್ಟಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲೂಕು ಸಹಾಯಕ ನಿರ್ದೇಶಕ ಹನುಮಂತಗೌಡ ಪೊಲೀಸ್‌ಪಾಟೀಲ್ ಮಾತನಾಡಿದರು.ಈ ಸಂದರ್ಭ ಎಫ್‌ಇಸಿ ಸಂಸ್ಥೆಯ ಜಿಲ್ಲಾ ಸಂಯೋಜಕ ವಾಸುದೇವ ಮೂರ್ತಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಚನ್ನಬಸವ, ಪಂಚಾಯತ್ ರಾಜ್‌ನ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ಜಿಪಂ ಎಂಐಎಸ್ ಸಂಯೋಜಕ ಮೈನುದ್ದಿನ್, ಅವಳಿ ತಾಲೂಕಿನ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅನುಷ್ಠಾನ ಇಲಾಖೆ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ಎಂ.ಐ.ಎಸ್ ಸಂಯೋಜಕರು, ಐ.ಇ.ಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಕಂಪ್ಯೂಟರ್ ಅಪರೇಟರ್‌ಗಳು, ಬಿ.ಎಫ್.ಟಿ ಗಳು, ಗ್ರಾಮ ಕಾಯಕ ಮಿತ್ರರು ಇದ್ದರು.