ಜಿಲ್ಲೆಯಲ್ಲಿ ಅಪರಾಧಗಳ ತಡೆ, ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಗಾಂಜಾ, ಡ್ರಗ್ಸ್, ಸೇಂದಿ, ಜೂಜಾಟ, ಅಕ್ರಮ ಮರಳು ಗಣಿಗಾರಿಕೆ, ಅಪಘಾತಗಳ ನಿಯಂತ್ರಣ, ಸೈಬರ್‌ ಕ್ರೈಮ್‌ ಸೇರಿದಂತೆ ಇತರೆ ಅನೈತಿಕ, ಅಕ್ರಮ ಚಟುವಟಿಕೆಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗುವುದು, ಜನ ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ಯಿಂದ ನಿರಂತರವಾಗಿ ಆಯೋಜನೆ ಮಾಡಲಾಗುವುದು ಎಂದು ಹೊಸ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯಲ್ಲಿ ಅಪರಾಧಗಳ ತಡೆ, ಕಾನೂನು ಸುಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಗಾಂಜಾ, ಡ್ರಗ್ಸ್, ಸೇಂದಿ, ಜೂಜಾಟ, ಅಕ್ರಮ ಮರಳು ಗಣಿಗಾರಿಕೆ, ಅಪಘಾತಗಳ ನಿಯಂತ್ರಣ, ಸೈಬರ್‌ ಕ್ರೈಮ್‌ ಸೇರಿದಂತೆ ಇತರೆ ಅನೈತಿಕ, ಅಕ್ರಮ ಚಟುವಟಿಕೆಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗುವುದು, ಜನ ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ಯಿಂದ ನಿರಂತರವಾಗಿ ಆಯೋಜನೆ ಮಾಡಲಾಗುವುದು ಎಂದು ಹೊಸ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.

ಸ್ಥಳೀಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ನಡೆಸಿದ ಔಪಚಾರಿಕ ಭೇಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಎಸ್ಪಿಯಾಗಿ ಜಿಲ್ಲೆಗೆ ಬಂದ ಬಳಿಕ ವಿವಿಧ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯ ಅಧಿಕಾರಿ, ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದರು.

ಠಾಣೆ ವ್ಯಾಪ್ತಿಗಳಲ್ಲಿ ಅಧಿಕಾರಿ, ಸಿಬ್ಬಂದಿ ಶಿಸ್ತು ಹಾಗೂ ಪಾರದರ್ಶಕತೆಯಿಂದ ಸೇವೆಯನ್ನು ಮಾಡಬೇಕು, ದಿನ ಹಾಗೂ ರಾತ್ರಿ ಪಾಳೆಯ ಗಸ್ತಿನಲ್ಲಿ ಕಟ್ಟೆಚ್ಚರಿಕೆ ವಹಿಸಬೇಕು, ಜನಸಂಚಾರ ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರವಾಗಿ ನಿಗಾವಹಿಸಬೇಕು, ಠಾಣೆಗಳ ವ್ಯಾಪ್ತಿಯಲ್ಲಿರುವ ಕಿಡಿಗೇಡಿಗಳ, ಪುಡಾರಿಗಳ ಪಟ್ಟಿಯನ್ನು ಪರಿಶೀಲಿಸಿ ಅವರುಗಳ ವರ್ತನೆಯ ಮೇಲೆ ಕಣ್ಣೀಡಲು ಸೂಚಿಸಿದ್ದು, ಅಪರಾಧ ಪ್ರಕರಣಗಳು, ಶಿಕ್ಷೆ ಮತ್ತು ರೂಢಿಗತ ಅಪರಾಧಗಳ ಕುರಿತು ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಒಟ್ಟು 1,300 ವಿವಿಧ ಹುದ್ದೆಗಳಿದ್ದು ಅವುಗಳಲ್ಲಿ 1,100 ಹುದ್ದೆಗಳು ಭರ್ತಿಯಾಗಿದ್ದು ಇನ್ನು 200 ಹುದ್ದೆಗಳು ಖಾಲಿ ಉಳಿದಿವೆ ಈ ಹಿನ್ನೆಲೆಯಲ್ಲಿ ಒತ್ತಡದಲ್ಲಿಯೇ ಹಗಲು-ರಾತ್ರಿ ಪೆಟ್ರೋಲಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್‌ ಸೇವೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡಲಾಗುವುದು ಎಂದರು.

ಎಲ್ಲಾ ಠಾಣೆಗಳಲ್ಲಿ ರೂಢಿಗತ ಅಪರಾಧಿಗಳ ಪಟ್ಟಿಯನ್ನು ಪರಿಷ್ಕರಿಸಿ ಅಪರಾಧಿ ಪ್ರವೃತ್ತಿ ಹೊಂದಿದವರ ಮೊಬೈಲ್ ತಪಾಸಣೆ, ಮನಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಯಲ್ಲಿರುವ ಮೊಬೈಲ್ ತಪಾಸಣೆ ನಡೆಸಿ ಅಪರಾಧಿ ಮನೋಭಾವ ಪತ್ತೆ ಮಾಡಲಾಗುತ್ತದೆ. ಸಮಾಜದ ಅಶಾಂತಿಗೆ ಕಾರಣವಾಗುವ ಸಂದೇಶಗಳ ವಿನಿಮಯ ಒಳಗೊಂಡಂತೆ ಚಟುವಟಿಕೆಗಳ ನಿಗಾವಹಿಸಲು ಸಿಬ್ಬಂದಿಗೆ ಅಗತ್ಯ ನಿರ್ದೇಶನ ಕೊಡಲಾಗಿದೆ.

ಹಬ್ಬ ಹರಿದಿನಗಳ ಜೊತೆಗೆ ವಿಶೇಷ ಸಮಯದಲ್ಲಿ ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಸಭೆಗಳನ್ನು ನಡೆಸಿ, ಜನ ಸಂಪರ್ಕ ಹೊಂದ ಬೇಕು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಮಸ್ಯೆಗಳ ನಿವಾರಣೆಗೆ ಆದ್ಯತೆ ಕಲ್ಪಿಸಬೇಕು, ಠಾಣಾವಾರು ಅಪರಾಧ ಪ್ರಕರಣ ಗಳ ಪತ್ತೆ, ನಿಯಂತ್ರಣ, ಸೈಬರ್‌ ಅಪರಾಧಗಳು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಸಹ ಅಧಿಕಾರಿ, ಸಿಬ್ಬಂದಿ ತಿಳಿಸಲಾಗಿದೆ ಎಂದರು.

ಗಡಿಭಾಗದ ಜಿಲ್ಲೆಯಾಗಿರುವುದರಿಂದ ಸಿಎಚ್‌ ಪೌಡರ್‌, ಸೇಂದ್ರಿ ಹಾಗೂ ಗಾಂಜಾ ಅಕ್ರಮ ಸಾಗಾಣಿಗೆ ಮೇಲೆ ನಿಗಾ ವಹಿಸುವುದು, ಮುಖ್ಯ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ರಿತೀಯ ಲಿಂಗಿಗಳಿಂದ ಉಂಟಾಗುತ್ತಿರುವ ತೊಂದರೆಯ ವಿಚಾರವಾಗಿ ಸೂಕ್ತ ಕ್ರಮ ವಹಿಸುವುದು, ಅನ್ಯ ರಾಜ್ಯಗಳಿಂದ ಬಂದು ದುಡಿಯುತ್ತಿರುವವರ ಗುರುತು ಸೇರಿ ಇತರೆ ಮಾಹಿತಿ ಸಂಗ್ರಹ, ನಗರದಲ್ಲಿ ಸಂಚಾರ ನಿಯಪ ಪಾಲನೆ, ಡ್ರಗ್ಸ್, ಸೈಬರ್‌ ಅಪರಾಧ, ಸಿಎಚ್‌ ಪೌಡರ್‌ ಸೇರಿ ವಿವಿಧ ರೀತಿಯ ಜನಜಾಗೃತಿ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ಆಯೋಜನೆ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೊಸ ಎಸ್ಪಿ ಅರುಣಾಂಗ್ಷು ಗಿರಿ ವಿವರಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಶಾಂತವೀರಯ್ಯ, ವೆಂಕಟೇಶ ಉಗಿ ಬಂಡಿ, ಸಿಪಿಐ, ಪಿಎಸ್ಐ ಸೇರಿ ಇತರರು ಇದ್ದರು.