ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಗಣೇಶಮೂರ್ತಿ ಮೆರವಣಿಗೆ ವೇಳೆ ಉಂಟಾದ ಕೋಮು ಗಲಭೆಯಿಂದಾಗಿ ಹೊತ್ತಿ ಉರಿದಿದ್ದ ವಿವಿಧ ಅಂಗಡಿಗಳ ಮಾಲೀಕರ ರೋದನ ಹೇಳತೀರದಾಗಿತ್ತು.ಶುಕ್ರವಾರ ವಾರದ ಸಂತೆ ದಿನವಾದ್ದರಿಂದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿಯೇ ನಡೆಯುತ್ತಿತ್ತು. ಆದರೆ, ಕಿಡಿಗೇಡಿಗಳು ನಡೆಸಿರುವ ಕೃತ್ಯದಿಂದ ಸುಟ್ಟು ಭಸ್ಮವಾಗಿರುವ ವಸ್ತುಗಳ ಮುಂದೆ ಕುಳಿತು ಸಾಧನಾ ಟೆಕ್ಸ್‌ಟೈಲ್ಸ್ ಮಾಲೀಕ ಭೀಮರಾಜ್ ಕಣ್ಣೀರು ಹಾಕಿದರು.
ದೊಡ್ಡದಾದ ಬಟ್ಟೆ ಅಂಗಡಿ ತೆರೆಯುವ ಸಲುವಾಗಿ ಮುಸ್ಲಿಂ ಸಮುದಾಯವರಿಗೆ ಸೇರಿದ ಕಟ್ಟಡವನ್ನು ಬಾಡಿಗೆಗೆ ಪಡೆದು 2 ಕೋಟಿಗೂ ಹೆಚ್ಚು ಸಾಲ ಮಾಡಿ ಬಂಡವಾಳ ಹಾಕಿ ಅಂಗಡಿಯಲ್ಲಿ ಹತ್ತಾರು ಮಂದಿಗೆ ಕೆಲಸ ಕೊಟ್ಟಿದ್ದೆ. ಆದರೆ, ಗಲಭೆಯಿಂದಾಗಿ ಎಲ್ಲವೂ ಸುಟ್ಟು ಕರಕಲಾಗಿದೆ. ಏನೂ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇಡೀ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿರುವುದರಿಂದ ಈಗ ನಾನೇ ಮತ್ತೊಬ್ಬರ ಬಳಿ ಕೆಲಸಕ್ಕೆ ಹೋಗುವಂತಹ ಸ್ಥಿತಿ ಬಂದಿದೆ. ಕಳೆದೆರಡು ದಿನದಿಂದ ಊಟ ಸೇರುತ್ತಿಲ್ಲ. ನಿದ್ರೆ ಬರುತ್ತಿಲ್ಲ. ಮಾಡಿರುವ ಸಾಲ ತೀರಿಸಿ ಕುಟುಂಬ ನಿರ್ವಹಿಸುವುದಾದರೂ ಹೇಗೆಂದು ರೋಧಿಸುತ್ತಿದ್ದರು.
ಮತ್ತೊಂದೆಡೆ ತಂದೆ ಕಾಲದಿಂದಲೂ ಈ ಅಂಗಡಿಯನ್ನು ನಡೆಸಿಕೊಂಡು ಬರ್‍ತಿದ್ದೀವಿ. ಪೊಲೀಸ್ ಠಾಣೆ ಎದುರಿನಲ್ಲೇ ಇರುವ ನಮ್ಮ ಅಂಗಡಿಗೆ ಯಾವ ಅಪಾಯವಾಗುವುದಿಲ್ಲ ಎಂಬ ಭರವಸೆ ಇತ್ತು.ಕೋಮು ಗಲಭೆ ನಡೆದ ದಿನ ಮನೆಯಲ್ಲಿದ್ದೆ. ಆದರೆ, ಕಿಡಿಗೇಡಿಗಳು ನನ್ನ ಅಂಗಡಿಗೂ ಬೆಂಕಿ ಹಾಕಿದ್ದಾರೆ. ಇದರಿಂದ 25 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಸಾಲ ಮಾಡಿ ಅಂಗಡಿಗೆ ಗೃಹೋಪಯೋಗಿ ವಸ್ತುಗಳನ್ನು ಹಾಕಿಸಿದ್ದೆ. ಈಗ ನನ್ನ ಕುಟುಂಬ ಬೀದಿಗೆ ಬರುವಂತಾಗಿದೆ ಎಂದು ಪಾತ್ರೆ ಅಂಗಡಿ ಮಾಲೀಕ ಮುಜೀಬ್ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಎ1 ಆರೋಪಿ ಕಿರಣ್ ಪೋಷಕರ ಕಣ್ಣೀರು:ನನ್ನ ಮಗ ಯಾವುದಕ್ಕೂ ಮುಖ್ಯಸ್ಥ ಆಗಿರಲಿಲ್ಲ. ಊರ ಹಬ್ಬ ಆದಾಗ ಹೋಗುವುದೇ ತಪ್ಪಾ?. ಗಣೇಶ ಪ್ರತಿಷ್ಠಾಪನೆಗೆ ಯಾರು ಅನುಮತಿ ಪಡೆದಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಹೋಗಿ ನೋಡ್ಲಿ. ಮಧ್ಯರಾತ್ರಿ ಬಾಗಿಲು ಬಡಿದು ಎಳೆದುಕೊಂಡು ಹೋಗಿದ್ದಾರೆ. ನನ್ನನ್ನೂ ಎಳೆದುಕೊಂಡು ಹೋಗಲು ನೋಡಿದ್ರು. ಭಯದಿಂದ ಓಡಿ ಹೋಗಿ ತಪ್ಪಿಸಿಕೊಂಡೆ ಎಂದು ಪ್ರಕರಣದ ಎ-1 ಆರೋಪಿ ಕಿರಣ್ ತಂದೆ ಶ್ರೀನಿವಾಸ್ ಅಳಲು ತೋಡಿಕೊಂಡರು.
ಗಣೇಶನ ಹಬ್ಬ ಮಾಡಿದ್ರಲ್ಲಾ ಅದನ್ನ ನೋಡಲು ಹೋಗಿದ್ದೇ ತಪ್ಪಾದಂತಾಗಿದೆ. ನನ್ನ ಮಗ ಬೆಂಗಳೂರಿನಲ್ಲಿದ್ದ. ಊರಿಗೆ ಬರುತ್ತೀನಿ ಅಂದಾಗ ಆರೋಗ್ಯ ಇಲಾಖೆಯಲ್ಲಿ ಡ್ರೈವರ್ ಕೆಲಸಕ್ಕೆ ಸೇರಿಸಿ ನಾನೇ ಕಾರ್ ತೆಗೆದುಕೊಟ್ಟು ಡ್ರೈವರ್ ಕೆಲಸ ಮಾಡಿಕೊಂಡಿದ್ದ ಎಂದರು.ಊರಿಗೆ ಬಂದು ಗಣೇಶ ಮೆರವಣಿಗೆ ನೋಡಲು ಹೋಗಿದ್ದು ತಪ್ಪಾಯಿತಾ?. ಪಟ್ಟಣದಲ್ಲಿ ಗಲಾಟೆ ಮಾಡಿದವರೆಲ್ಲ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಬಂಧಿಸಿದ ಮೇಲೆ ನಮ್ಮ ಮಗ ಎಲ್ಲಿದ್ದಾನೆ ಗೊತ್ತಿಲ್ಲ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಹೋಗಿ ನೋಡಿದ್ದು. ಈಗ ನಮ್ಮ ಮಗ ಎಲ್ಲಿದ್ದಾನೆ ಗೊತ್ತಾಗುತ್ತಿಲ್ಲ ಎಂದು ಕಿರಣ್ ತಾಯಿ ಲತಾ ಕಣ್ಣೀರು ಹಾಕಿದರು.