ಸಿ.ಟಿ. ರವಿ ಬಂಧನ: ಚಿಕ್ಕಮಗಳೂರು ನಗರ ಬಂದ್‌ಗೆ ನೀರಸ ಪ್ರತಿಕ್ರಿಯೆ

| Published : Dec 21 2024, 01:18 AM IST

ಸಾರಾಂಶ

ಚಿಕ್ಕಮಗಳೂರುಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಆಕ್ಷೇಪಾರ್ಹ ಪದ ಬಳಿಸಿದ ಆರೋಪದ ಮೇರೆಗೆ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರ ಬಂಧನವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಶುಕ್ರವಾರ ಕರೆ ನೀಡಿದ್ದ ಚಿಕ್ಕಮಗಳೂರು ನಗರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ರಸ್ತೆ ತಡೆ, ಹಲವೆಡೆ ಟೈರಿಗೆ ಬೆಂಕಿ, ಚಿಕ್ಕ ಚಿಕ್ಕ ಗುಂಪಾಗಿ ಅಂಗಡಿಗಳ ಬಂದ್‌ಗೆ ಯತ್ನ, ಪ್ರತಿಭಟನಾಕಾರರು ವಶಕ್ಕೆ, ಎಂದಿನಂತೆ ಇದ್ದ ಜನ ಜೀವನ, ಮಧ್ಯಾಹ್ನಕ್ಕೆ ತಣ್ಣಗಾದ ಪ್ರತಿಭಟನೆಯ ಕಾವು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಆಕ್ಷೇಪಾರ್ಹ ಪದ ಬಳಿಸಿದ ಆರೋಪದ ಮೇರೆಗೆ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರ ಬಂಧನವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಶುಕ್ರವಾರ ಕರೆ ನೀಡಿದ್ದ ಚಿಕ್ಕಮಗಳೂರು ನಗರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ನೀಡಲಾಗಿತ್ತು. ಬೆಳಿಗ್ಗೆಯಿಂದಲೇ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಕಾವು ಜೋರಾಗಿತ್ತು. ಸುಮಾರು 2 ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಮಧ್ಯಾಹ್ನ 12.10ರ ವೇಳೆಗೆ ಪೊಲೀಸರು ವಶಕ್ಕೆ ಪಡೆದು ಕಡೂರು ತಾಲೂಕಿನ ಕೆಲವು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಇಡೀ ವಾತಾವರಣ ತಣ್ಣಗಾಯಿತು.

ವಿಧಾನಪರಿಷತ್‌ ಅಧಿವೇಶನದಲ್ಲಿ ಸಿ.ಟಿ. ರವಿ ಅವರನ್ನು ಬಂಧಿಸಲಾಗಿದ ಕ್ರಮ ಖಂಡಿಸಿ ಶುಕ್ರವಾರ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ರಾತ್ರೋರಾತ್ರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಯಿತು. ಇದರ ಜತೆಗೆ ಕೆಎಸ್‌ಆರ್‌ಪಿ ತುಕಡಿ ಸಹ ನಿಯೋಜನೆ ಮಾಡಲಾಗಿತ್ತು.

ಬೆಳಗಾಗುತ್ತಿದ್ದಂತೆ ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ. ರವಿ ಅವರ ನಿವಾಸದ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯ ಕರ್ತರು ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಪೊಲೀಸರು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಸಿ. ಕಲ್ಮರುಡಪ್ಪ ಸೇರಿದಂತೆ ಹಲವು ಮಂದಿಯನ್ನು ವಶಕ್ಕೆ ಪಡೆದರು.

ನಂತರ ಮತ್ತೊಂದು ತಂಡದಲ್ಲಿ ಹನುಮಂತಪ್ಪ ವೃತ್ತಕ್ಕೆ ಬಂದ ಮುಖಂಡರು ಹಾಗೂ ಕಾರ್ಯಕರ್ತರು ಇಲ್ಲಿ ಮಾನವ ಸರಪಳಿ ನಿರ್ಮಿಸಿ ಈ ರಸ್ತೆಯಲ್ಲಿ ಯಾವುದೇ ವಾಹನಗಳು ಓಡಾಡದಂತೆ ರಸ್ತೆಯಲ್ಲಿ ಕುಳಿತರು. ಒಂದೆ ಕಡೆಯಲ್ಲಿ ಗುಂಪು ಗುಂಪಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಘೋಷಣೆ ಹಾಕಿದರು. ಸುಮಾರು 2 ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ತೀವ್ರ ಗೊಳಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಪ್ರತಿಭಟನಾಕಾರರ ಮನ ವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೂ ಸ್ಪಂದಿಸದೆ ಇದ್ದರಿಂದ ಮಧ್ಯಾಹ್ನ 12.10 ರ ವೇಳೆಗೆ ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಬಳಿಕ ಮಹಿಳಾ ಪ್ರತಿಭಟನಾಕಾರರನ್ನು ಪೊಲೀಸರು ಬಿಡುಗಡೆ ಮಾಡುತ್ತಿದ್ದಂತೆ ಇಲ್ಲಿನ ಗಾಂಧಿ ಪ್ರತಿಮೆ ಎದುರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು. ವಿಧಾನಪರಿಷತ್‌ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಸ್ಥಳಕ್ಕೆ ಬಂದು ಮನವೊಲಿಸಿದ ನಂತರ ಮಹಿಳೆಯರು ಧರಣಿ ಕೈಬಿಟ್ಟರು.

ಎಂಜಿ ರಸ್ತೆ, ಐಜಿ ರಸ್ತೆ, ವಿಜಯಪುರ, ಬಸವನಹಳ್ಳಿ ಹೊರತು ಪಡಿಸಿದರೆ ಇನ್ನುಳಿದ ಕಡೆಗಳಲ್ಲಿ ಅಂಗಡಿಗಳು ತೆರೆದಿದ್ದವು. ಸರ್ಕಾರಿ, ಖಾಸಗಿ ಬಸ್‌ ಸಂಚಾರ ಎಂದಿನಂತೆ ಮುಂದುವರಿದಿತ್ತು. ಶಾಲಾ, ಕಾಲೇಜುಗಳು, ಬ್ಯಾಂಕ್‌, ಸರ್ಕಾರಿ ಕಚೇರಿಗಳು, ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದವು. ಮಧ್ಯಾಹ್ನ 1 ಗಂಟೆ ನಂತರ ಜನರ ಓಡಾಟ ಸಹಜವಾಯಿತು.

-- ಬಾಕ್ಸ್‌ ---ಟೈಯರ್‌ಗೆ ಬೆಂಕಿಹೆಚ್ಚಿನ ಸಂಖ್ಯೆಯಲ್ಲಿ ನಗರದ ಹನುಮಂತಪ್ಪ ವೃತ್ತದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ ಅಲ್ಲಿಯೇ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಹಾಗಾಗಿ ತಾವು ಬೇರೆ ಬೇರೆ ರಸ್ತೆಗಳಲ್ಲಿ ಅಂಗಡಿ ಬಂದ್‌ ಮಾಡಿಸಬಹುದೆಂಬ ಲೆಕ್ಕಾಚಾರದಲ್ಲಿ ಕೆಲವು ಮುಖಂಡರು 4-5 ಜನರ ಗುಂಪು ಕಟ್ಟಿಕೊಂಡು ಅಂಗಡಿ ಬಂದ್‌ ಮಾಡಿಸುತ್ತಿದ್ದು ಕಂಡು ಬಂತು.

ನಗರದ ಎಂಜಿ ರಸ್ತೆ, ಐಜಿ ರಸ್ತೆ, ವಿಜಯಪುರದಲ್ಲಿ ಈ ರೀತಿಯ ಪ್ರಯತ್ನ ಮಾಡಿ ಯಶಸ್ವಿಯಾದರು. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಕೆಲವರನ್ನು ವಶಕ್ಕೆ ತೆಗೆದುಕೊಂಡರು. ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ತೀವ್ರ ಸ್ವರೂಪ ನೀಡಲು ಬಿಜೆಪಿ ಕಾರ್ಯಕರ್ತರು ಅಲ್ಲಿಲ್ಲಿ ಟೈರುಗಳಿಗೆ ಬೆಂಕಿ ಹಚ್ಚುವ ಯತ್ನ ಮಾಡಿದ್ದರು. ಇಲ್ಲಿನ ದೋಣಿಕಣ, ಎಂ.ಜಿ. ರಸ್ತೆ, ದಂಟರಮಕ್ಕಿ, ಕಲ್ಲು ದೊಡ್ಡಿ, ಕೆ.ಎಂ. ರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿದ್ದರು.

---ಟಾಂಗ್‌ ಕೊಟ್ಟ ವರ್ತಕನಗರದ ಎಂ.ಜಿ. ರಸ್ತೆಯಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಅಂಗಡಿ ಮಾಲೀಕರೋಬ್ಬರು ಯಾಕೆ ಬಂದ್‌ ಮಾಡಬೇಕೆಂದು ಪ್ರಶ್ನೆ ಮಾಡಿದ್ದಾರೆ. ನನ್ನ ಅಂಗಡಿಯ ಒಂದು ದಿನದ ವ್ಯಾಪಾರ ₹13 ಲಕ್ಷ ನೀವು ಕೊಡ್ತೀರಾ, 2016ರಲ್ಲಿ ನಿಮ್ಮದೇ ಪಕ್ಷದ ನಾಯಕರು ಅಧಿಕಾರದಲ್ಲಿದ್ದರು. ನನ್ನ ಅಂಗಡಿಗೆ ಮಳೆ ನೀರು ನುಗ್ಗಿ ಸುಮಾರು ₹ 30 ಲಕ್ಷ ನಷ್ಟವಾಗಿತ್ತು. ನಿಮ್ಮ ನಾಯಕರು ಸಮಸ್ಯೆ ಬಗೆಹರಿಸಲಿಲ್ಲ ಎಂದು ಕಿಡಿಕಾರಿದರು. ಅಂಗಡಿ ಬಂದ್‌ ಮಾಡಿಸಲು ಬಂದ ಕಾರ್ಯಕರ್ತರು ಒಂದು ಮಾತನಾಡದೆ ವಾಪಸ್‌ ತೆರಳಿದರು.

ಮುಂದೆ ಆಜಾದ್‌ ಪಾರ್ಕ್‌ ಕಡೆ ಬಿಜೆಪಿ ಕಾರ್ಯಕರ್ತರು ಅಂಗಡಿ ಮುಚ್ಚಿಸಲು ತೆರಳುವ ವೇಳೆ ಇದೇ ಸ್ಥಳದಲ್ಲಿ ಸಿ.ಟಿ. ರವಿ ಹಾಗೂ ಅಮಿತ್‌ ಶಾ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ಎದುರಾಗಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ನಡೆಯುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಗುಂಪುಗಳನ್ನು ಚದುರಿಸಿದ್ದಾರೆ.

--ಮುಂದುವರಿದ ಬಂದೋಬಸ್ತ್‌

ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ ಹಿನ್ನಲೆ ಜಿಲ್ಲಾ ಕೇಂದ್ರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿ.ಟಿ. ರವಿ ನಿವಾಸ, ಜಿಲ್ಲಾ ಬಿಜೆಪಿ ಕಾರ್ಯಾಲಯ, ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ಇತರೆ ಪೊಲೀಸ್‌ ಅಧಿಕಾರಿಗಳು ಪ್ರಮುಖ ರಸ್ತೆಗಳಲ್ಲಿ ನಿರಂತರವಾಗಿ ವಾಹನಗಳಲ್ಲಿ ರೌಂಡ್ಸ್‌ ಹಾಕುತ್ತಿದ್ದರು.

20 ಕೆಸಿಕೆಎಂ 1ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಖಂಡಿಸಿ ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

-- 20 ಕೆಸಿಕೆಎಂ 2

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಖಂಡಿಸಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಚಿಕ್ಕಮಗಳೂರಿನ ಗಾಂಧಿ ಪ್ರತಿಮೆ ಎದುರು ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.