ಸುಖಿ ಸಮಾಜಕ್ಕೆ ಸಾಂಸ್ಕೃತಿಕ ಚಟುವಟಿಕೆ ಅಗತ್ಯ

| Published : Dec 21 2024, 01:19 AM IST

ಸಾರಾಂಶ

ರಾಮನಗರ: ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಚಿತ್ರಕಲೆಗಳಿಂದಲೂ ಸುಖಿ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ರಾಮನಗರ: ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಚಿತ್ರಕಲೆಗಳಿಂದಲೂ ಸುಖಿ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಜಾನಪದ ಲೋಕದ ಸಮೀಪದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆಯೋಜಿಸಿದ್ದ ಬೆಂಗಳೂರು ವಿಭಾಗಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಅನ್ನವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಆಹಾರವಷ್ಟೇ ಬದುಕಲ್ಲ. ಅದರಾಚೆಗೂ ಜೀವನವಿದೆ. ಆಟೋಟಗಳನ್ನು ಆಡುವುದು. ಪ್ರಕೃತಿ ಸೌಂದರ್ಯ ವೀಕ್ಷಿಸುವುದು. ಆಹ್ಲಾದಕರ ವಾತಾವರಣ ಸವಿಯುವುದು. ನೃತ್ಯ, ಸಂಗೀತ ಇವೆಲ್ಲವೂ ಮನಸ್ಸಿಗೆ ಹಿತ ನೀಡುತ್ತವೆ. ಜೀವನದಲ್ಲಿ ಇವೆಲ್ಲವೂ ಮುಖ್ಯ ಎಂದಿ ಹೇಳಿದರು.

ಓದಿನ ಜೊತೆಗೆ ಸೃಜನಾತ್ಮಕ ಮತ್ತು ಕ್ರಿಯಾಶೀಲ ಮನಸ್ಸು ಇಟ್ಟುಕೊಳ್ಳಬೇಕು. ಪ್ರತಿಯೊಂದು ಕ್ರಿಯೆಯಲ್ಲಿಯೂ ಬದುಕಿನ ಸೂಕ್ಷ್ಮತೆಗಳು ಅಡಗಿರುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಇರಬೇಕು. ವಿದ್ಯೆ ಒಳ ಜಗತ್ತನ್ನು ತೃಪ್ತಿಪಡಿಸಿದರೆ, ಸಾಂಸ್ಕೃತಿಕ ಚಟುವಟಿಕೆ ಹೊರ ಜಗತ್ತನ್ನು ತೃಪ್ತಿಪಡಿಸಲು ನೆರವಾಗುತ್ತವೆ. ಸಂಗೀತಗಾರ, ಹಾಡುಗಾರ, ನೃತ್ಯಪಟು, ಅಭಿನಯ ಚತುರರಾಗುವ ಅವಕಾಶಗಳನ್ನು ಒದಗಿಸಿಕೊಡಲು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಅಗತ್ಯ ಎಂದರು.

ಡಾ.ಭೈರಮಂಗಲ ರಾಮೇಗೌಡ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅನುಭವಿಗಳಾದರೆ, ಆತ್ಮವಿಶ್ವಾಸದಿಂದ ಮುನ್ನಡೆ ಸಾಧಿಸಿದರೆ, ಭವಿಷ್ಯದ ಬದುಕನ್ನು ಬೆಳಗಿಸಿಕೊಳ್ಳುವ ಸಾಧ್ಯತೆಗಳು ಸಾಕಷ್ಟಿವೆ. ವಿದ್ಯಾರ್ಥಿಗಳು ವೇದಿಕೆಯಲ್ಲಿ ತಮ್ಮ ಕಲಾ ಪ್ರತಿಭೆ ಪ್ರದರ್ಶಿಸುವಾಗ ಅವರ ಉತ್ಸಾಹ, ಹುಮ್ಮಸ್ಸನ್ನು ನೋಡಿ ಪೋಷಕರು, ಅಧ್ಯಾಪಕರು, ಪ್ರೇಕ್ಷಕರು ವಿಸ್ಮಯಗೊಳ್ಳುತ್ತಾರೆ.ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರ ಆಸಕ್ತಿ, ಅಭಿರುಚಿ ಆಳವಾಗಿ ಬೆಳೆಸಿಕೊಂಡು ಸಾಧನೆ ಮಾಡಿದವರು ಬಹಳಷ್ಟು ಮಂದಿ ನಮ್ಮ ಕಣ್ಮುಂದೆ ಬೆಳಗುತ್ತಿದ್ದಾರೆ ಎಂದರು.

ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಹೋರಾಟ ಮತ್ತು ಧೈರ್ಯದಿಂದ ಜೀವನ ರೂಪಿಸಿಕೊಳ್ಳಲು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ ಅಗತ್ಯ. ಸಕಾರಾತ್ಮಕ ಆಲೋಚನೆಗಳನ್ನು ಹೊಂದಲು, ಉತ್ಸಾಹ ಮತ್ತು ಉಲ್ಲಾಸದಿಂದ ಕೆಲಸ ಕಾರ್ಯ ನಿರ್ವಹಿಸಲು ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು ಪ್ರೇರಣೆ ನೀಡುತ್ತವೆ. ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಮನಗರ ಜಿಲ್ಲೆ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ಆತ್ಮಬಲ, ಸಮರ್ಪಣಾಭಾವ ಹೆಚ್ಚಿಸುತ್ತವೆ. ಸೋತವರಿಗೆ ಮತ್ತಷ್ಟು ಅವಕಾಶಗಳು ದೊರೆಯುತ್ತವೆ. ಆತ್ಮವಿಶ್ವಾಸ ಕಳೆದುಕೊಳ್ಳದೆ ನಾಳಿನ ಗೆಲುವಿಗೆ ಕಠಿಣ ಶ್ರಮ ಪಟ್ಟರೆ ಫಲ ಸಿಕ್ಕೇ ಸಿಗುತ್ತದೆ. ಹತ್ತು ಜಿಲ್ಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿರುವ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲು ಶ್ರೀ ಆದಿಚುಂಚನಗಿರಿ ಮಠದ ಮಹಾಸ್ವಾಮೀಜಿ ಸಮ್ಮತಿಸಿರುವುದು ಸಂತೋಷದ ಸಂಗತಿ ಎಂದರು.

ಮನೋಜ್ಞವಾಗಿ ಭರತನಾಟ್ಯ ನೃತ್ಯ ಪ್ರದರ್ಶನ ಮಾಡಿದ ಶ್ರೀ ಲಲಿತ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿನಿಯರಿಗೆ ಸುಗ್ಗನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎನ್.ಪ್ರದೀಪ್ 5 ಸಾವಿರ ರು ಪ್ರೋತ್ಸಹಧನ ವಿತರಿಸಿದರು.

ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಡಾ.ಎ.ಟಿ.ಶಿವರಾಮು, ಖಾಜಾಂಚಿ ಬಿ.ಮಹೇಶ್, ವಿದುಷಿ ಡಿ.ನಾಗವೇಣಿ, ಉಪನ್ಯಾಸಕರ ಸಂಘದ ಅಧ್ಯಕ್ಷ ವೇಣಿಗೋಪಾಲ್, ಬಿಜಿಎಸ್‌ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ.ಸುರೇಶ್, ಪ್ರಾಂಶುಪಾಲರಾದ ಹೆಚ್.ಹೇಮೇಗೌಡ, ಬಸವರಾಜು, ವೆಂಕಟಲಕ್ಷ್ಮಿ, ರೇಖಾ, ನಜ್ರುಲ್ಲಾಖಾನ್, ಜೆ.ಬಿ.ಚನ್ನವೀರಯ್ಯ, ಓಂಕಾರಮೂರ್ತಿ, ಉಪನ್ಯಾಸಕ ಬೆಟ್ಟಸ್ವಾಮಿ, ಕೆ.ವೆಂಕಟೇಶ್, ಎಂ.ಎಂ.ಪ್ರಕಾಶ್ ಹಾಜರಿದ್ದರು.

ಪೊಟೋ೧೮ಸಿಪಿಟಿ೨:

ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಬೆಂಗಳೂರು ವಿಭಾಗಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಇತರರು ಭಾಗವಹಿಸಿದ್ದರು.