ಸಾರಾಂಶ
ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಕ್ಸ್‌ಟೌನ್‌ನಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಕ್ಸ್‌ಟೌನ್‌ನಲ್ಲಿ ಬುಧವಾರ ಮುಂಜಾನೆ ನಡೆದಿದೆ.ಕಾಕ್ಸ್‌ಟೌನ್‌ನ ಡೇವಿಸ್ ರಸ್ತೆಯ ವಿಶ್ರಾಂ ಅಪಾರ್ಟ್‌ಮೆಂಟ್ ನಿವಾಸಿಗಳಾದ ಸಿಲಿಕಾ (42) ಮತ್ತು ಅವರ ಪತಿ ಸಿದ್ದೇಶ್(45) ಗಾಯಗೊಂಡವರು. ಸ್ಫೋಟದಿಂದ ದಂಪತಿಗೆ ಶೇ.75ರಷ್ಟು ಸುಟ್ಟಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಖಾಸಗಿ ಕಂಪನಿಗಳ ಉದ್ಯೋಗಿಗಳಾದ ಸಿದ್ದೇಶ್ ಮತ್ತು ಸಿಲಿಕಾ ಕಳೆದ 10 ವರ್ಷಗಳಿಂದ ಕಾಕ್ಸ್‌ಟೌನ್‌ನ ವಿಶ್ರಾಂ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಬುಧವಾರ ಮುಂಜಾನೆ ಸುಮಾರು 5 ಗಂಟೆಗೆ ಎದ್ದು ಅಡುಗೆ ಮನೆಗೆ ಬಂದು ಟೀ ಮಾಡಲು ಗ್ಯಾಸ್ ಸ್ಟೌವ್ ಹಚ್ಚಿದ ವೇಳೆ ಏಕಾಏಕಿ ಸ್ಫೋಟಗೊಂಡು ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಕಿಟಕಿ ಗ್ರಿಲ್‌ಗಳು ರಸ್ತೆಗೆ:
ಸ್ಫೋಟದ ರಭಸಕ್ಕೆ ಫ್ಲಾಟ್‌ನ ಪೀಠೋಪಕರಣಗಳು, ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿವೆ. ಅಡುಗೆ ಕೋಣೆಯ ಕಿಟಕಿ ಗ್ರಿಲ್‌ಗಳು ಕಿತ್ತು ರಸ್ತೆಗೆ ಬಿದ್ದಿವೆ. ಶಬ್ಧಕ್ಕೆ ಅಕ್ಕಪಕ್ಕದ ನಿವಾಸಿಗಳು ಎಚ್ಚರಗೊಂಡು ದೌಡಾಯಿಸಿದ್ದು, ಬೆಂಕಿ ಕಂಡು ಅಗ್ನಿಶಾಮಕ ನಿಯಂತ್ರಣ ಕೊಠಡಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.ಇಡೀ ರಾತ್ರಿ ಅನಿಲ ಸೋರಿಕೆ ಸಾಧ್ಯತೆ:
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದಂಪತಿ ಸೋಮವಾರ ರಾತ್ರಿ ಮಲಗುವ ಮುನ್ನ ಗ್ಯಾಸ್ ಸಿಲಿಂಡರ್ ಆಫ್ ಮಾಡದಿರುವ ಸಾಧ್ಯತೆಯಿದೆ. ಹೀಗಾಗಿ ಇಡೀ ರಾತ್ರಿ ಅನಿಲ ಸೋರಿಕೆಯಾಗಿ ಮನೆಯಲ್ಲಾ ಹರಡಿಕೊಂಡಿದೆ. ಮುಂಜಾನೆ ಗ್ಯಾಸ್ ಸ್ಟವ್ ಹಚ್ಚಿದಾಗ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.