ಪೊಲೀಸ್ ಭದ್ರತೆ ಒದಗಿಸದಿದ್ದರೆ ಕಾನೂನು ಹೋರಾಟ: - ಭಾಸ್ಕರ್ ಎಚ್ಚರಿಕೆ

| Published : Mar 27 2025, 01:04 AM IST

ಸಾರಾಂಶ

ಜೀವ ಬೆದರಿಕೆ ಇರುವ ಶ್ರೀರಾಮ ಸೇನಾ ಬೆಂಗಳೂರು ನಗರದ ಕಗ್ಗಲೀಪುರ ಘಟಕ ಅಧ್ಯಕ್ಷರಾಗಿರುವ ವಕೀಲ ಎನ್.ಉಮೇಶ್‌ಗೆ ಪೊಲೀಸ್ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ನಾವುಗಳೇ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಶ್ರೀರಾಮ ಸೇನಾ ರಾಜ್ಯ ವಕ್ತಾರ ಎಸ್. ಭಾಸ್ಕರ್ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜೀವ ಬೆದರಿಕೆ ಇರುವ ಶ್ರೀರಾಮ ಸೇನಾ ಬೆಂಗಳೂರು ನಗರದ ಕಗ್ಗಲೀಪುರ ಘಟಕ ಅಧ್ಯಕ್ಷರಾಗಿರುವ ವಕೀಲ ಎನ್.ಉಮೇಶ್‌ಗೆ ಪೊಲೀಸ್ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ನಾವುಗಳೇ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಶ್ರೀರಾಮ ಸೇನಾ ರಾಜ್ಯ ವಕ್ತಾರ ಎಸ್. ಭಾಸ್ಕರ್ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.

ನಗರದ ಪೊಲೀಸ್ ಭವನದಲ್ಲಿ ಎಸ್ಪಿ ಶ್ರೀನಿವಾಸ್‌ಗೌಡರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಗ್ಗಲೀಪುರ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್ .ಪರ್ವೀಜ್ ಸಾರ್ವಜನಿಕವಾಗಿ ಹಾಗೂ ದೂರವಾಣಿ ಮೂಲಕ ಎನ್.ಉಮೇಶ್‌ಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಪೂರಕವಾದ ಆಡಿಯೋವನ್ನು ದೂರಿನೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಆದರೆ, ಇದನ್ನು ಸಾಧಾರಣ ಪ್ರಕರಣದಂತೆ ಪರಿಗಣಿಸಿರುವ ವರಿಷ್ಠಾಧಿಕಾರಿಗಳಿಂದ ಕಾನೂನು ಸ್ಪಂದನೆ ಸಿಗುವುದು ಅನುಮಾನವಾಗಿದೆ ಎಂದರು.

ಪೊಲೀಸ್ ಇಲಾಖೆಯಿಂದ ಎನ್.ಉಮೇಶ್‌ಗೆ ಭದ್ರತೆ ಒದಗಿಸದಿದ್ದರೆ ಹೈಕೋರ್ಟ್ ಅಥವಾ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿಗಳ ಮೊರೆ ಹೋಗಲು ನಿರ್ಧರಿಸಿದ್ದೇವೆ. ಅಲ್ಲಿಯೂ ಪೊಲೀಸ್ ಭದ್ರತೆ ಸಿಗದಿದ್ದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಕಾನೂನನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಗ್ಗಲೀಪುರ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್.ಪರ್ವೀಜ್ ಮತ್ತು ಅವರ ತಂದೆ ಶೇಕ್ ಅಹಮದ್ ವಿರುದ್ಧ ಅತ್ಯಾಚಾರದ ಮೊಕದ್ದಮೆ ದಾಖಲಾಗಿದೆ. ಸಂತ್ರಸ್ತೆ ಪರ ಎನ್.ಉಮೇಶ್ ಸರ್ಕಾರಿ ಅಭಿಯೋಜಕರಿಗೆ ಸಾಕ್ಷ್ಯಗಳನ್ನು ಒದಗಿಸಲು ಸಹಕರಿದ್ದೇ ವೈರತ್ವಕ್ಕೆ ಕಾರಣ. ಅಲ್ಲದೆ, ಪರ್ವೀಜ್ ಅಧ್ಯಕ್ಷರಾಗಿದ್ದ ವೇಳೆ ಕಗ್ಗಲೀಪುರ ಗ್ರಾಪಂನಲ್ಲಿ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಉಮೇಶ್ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ಇದು ತನಿಖಾ ಹಂತದಲ್ಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅನೇಕ ಹಿಂದೂ ದೇವಸ್ಥಾನಗಳ ಆಸ್ತಿಗಳನ್ನು ಮಸೀದಿಗಳಿಗೆ ಸೇರಿದ ಆಸ್ತಿಯೆಂದು ಅತಿಕ್ರಮಣ ಮಾಡುವ ಪ್ರಯತ್ನ ಮಾಡಿದರು. ಆಗ ಉಮೇಶ್ ಹಿಂದೂ ದೇವಸ್ಥಾನಗಳ ಆಸ್ತಿಪರ ಹೋರಾಡಿದ್ದಕ್ಕೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಭಾಸ್ಕರ್ ದೂರಿದರು.

ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ನಾಗಾರ್ಜುನಗೌಡ ಮಾತನಾಡಿ, ರಾಜಕೀಯ ಪ್ರಭಾವ ಬಳಸಿ ಪರ್ವೀಜ್ ಸಾಲುವರಸೆ ಗ್ರಾಮದಲ್ಲಿರುವ ಆಂಜನೇಯ ಮತ್ತು ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸೇರಿದ ಜಾಗವನ್ನು ದಾನವಾಗಿ ನೀಡಿದ್ದಾರೆಂದು ಗ್ರಾಪಂನಲ್ಲಿ ನಿರ್ಣಯ ಮಾಡಿ ಅತಿಕ್ರಮಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನಾ ಸಂಘಟನಾ ಕಾರ್ಯದರ್ಶಿ ವೈ.ಡಿ.ಅಮರನಾಥ್, ಕಗ್ಗಲೀಪುರ ಘಟಕ ಅಧ್ಯಕ್ಷ ಎನ್.ಉಮೇಶ, ಉಪಾಧ್ಯಕ್ಷ ಕೃಷ್ಣಮೂರ್ತಿ ಇದ್ದರು.