ಸಾರಾಂಶ
ಕೆಐಎಡಿಬಿ ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಗೆದ್ದಲಹಳ್ಳಿ, ಗೊಟ್ಟಿಗೆರೆ ಹಾಗೂ ಮಾಚನಹಳ್ಳಿ ಗ್ರಾಮಗಳ 520 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿದ್ದು ರೈತರ ಜಮೀನುಗಳಿಗೆ ದರ ನಿಗದಿ ಸಂಬಂಧ ಕರೆದಿದ್ದ ಸಭೆ ಗೊಂದಲದ ಗೂಡಾಯಿತು.
-ಎಕರೆಗೆ 1.40 ಕೋಟಿ ನಿಗದಿಪಡಿಸಿದರೂ ಒಪ್ಪದ ರೈತರು -ಸೋಂಪುರ ಹೋಬಳಿಯ 520 ಎಕರೆ ಭೂಮಿ ಸ್ವಾಧೀನಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಕೈಗಾರಿಕಾ ಸ್ಥಾಪನೆ ಉದ್ದೇಶದಿಂದ ಕೆಐಎಡಿಬಿ ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಗೆದ್ದಲಹಳ್ಳಿ, ಗೊಟ್ಟಿಗೆರೆ ಹಾಗೂ ಮಾಚನಹಳ್ಳಿ ಗ್ರಾಮಗಳ 520 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿದ್ದು ರೈತರ ಜಮೀನುಗಳಿಗೆ ದರ ನಿಗದಿ ಸಂಬಂಧ ಶಿವಗಂಗೆಯ ಶ್ರೀ ಸ್ವರ್ಣಾಂಭ ಪ್ರಾರ್ಥನಾ ಮಂದಿರದಲ್ಲಿ ಕರೆದಿದ್ದ ಸಭೆ ಗೊಂದಲದ ಗೂಡಾಗಿ ಸ್ಥಳದಿಂದ ಜಿಲ್ಲಾಧಿಕಾರಿ ಸೇರಿದಂತೆ ಕೆಐಎಡಿಬಿ ಅಧಿಕಾರಿಗಳು ಕಾಲ್ಕಿತ್ತ ಘಟನೆ ನಡೆಯಿತು.ವೈಜ್ಞಾನಿಕ ಬೆಲೆ ನಿಗದಿ ಮಾಡಿ:
ಗೆದ್ದಲಹಳ್ಳಿ ರೈತ ಸಿದ್ದಲಿಂಗಯ್ಯ ಮಾತನಾಡಿ, ನೀವು ದರ ನಿಗದಿ ಮಾಡಲು ಸಭೆ ಕರೆದಿದ್ದೀರಿ. ಸಬ್ ರಿಜಿಸ್ಟಾರ್ ಭೂ ದರದ ಮಾಹಿತಿ ಪಡೆದು ಬೆಲೆ ನಿಗದಿ ಮಾಡುತ್ತಿದ್ದು, ಈ ದರ ಅವೈಜ್ಞಾನಿಕವಾಗಿದೆ. ಆದರೆ ಇಂದಿನ ಮಾರ್ಕೆಟ್ ದರ ಬೇರೆಯೇ ಇದೆ. ಮಾಹಿತಿಗೆ ಅನುಸಾರ ದರ ನಿಗದಿ ಮಾಡಬೇಕು. ಹಾಗೆಯೇ ರೈತರು ಬೆಳೆದಿರುವ ಅಡಿಕೆ, ತೆಂಗು ಇತ್ಯಾದಿ ಬೆಳೆಗಳಿಗೆ ಸರಿಯಾಗಿ ಜೆಎಂಸಿ ಮಾಡಿ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.50:50 ಅನುಪಾತದಲ್ಲಿ ಪರಿಹಾರ ನೀಡಿ:
ರೈತ ಮಾಚನಹಳ್ಳಿ ಅರುಣ್ ಮಾತನಾಡಿ, ಮುಡಾದಲ್ಲಿ ಮುಖ್ಯಮಂತ್ರಿಯೇ 50:50 ಅನುಪಾತದಲ್ಲಿ ಜಮೀನು ಕೇಳುತ್ತಿದ್ದಾರೆ. ಆದರೆ ರೈತರಿಗೆ ಎಕರೆಗೆ ಕೇವಲ 10,800 ಚದರ ಅಡಿ ನೀಡುವುದು ನ್ಯಾಯಸಮ್ಮತವಲ್ಲ. ಹಣ ಪಡೆಯದ ರೈತರಿಗೆ ಕಳೆದುಕೊಂಡ ಭೂಮಿಯ ಬದಲಿಗೆ ಶೇಕಡಾ 50ರಷ್ಟು ಭೂಮಿ ನೀಡಬೇಕು ಎಂದು ಹೇಳಿದಾಗ ನೆರೆದಿದ್ದ ರೈತರು ಒಕ್ಕೊರಲಿನಿಂದ ಧ್ವನಿಗೂಡಿಸಿದರು.ಎರಡು ಸೈಟೂ ಬರಲ್ಲ :
ರೈತ ಕಂಬಾಳು ಉಮೇಶ್ ಮಾತನಾಡಿ, ರೈತರ ಕಷ್ಟ ನಿಮಗೆ ಅರ್ಥವಾಗುವುದಿಲ್ಲ. ನಾವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದೇವೆ. ಈಗ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳುವ ಹಣದಲ್ಲಿ ಎರಡು ಸೈಟು ಬರುವುದು ಕೂಡ ಕಷ್ಟವಿದೆ. ಮುಂದೆ ನಮ್ಮ ಜೀವನ ಸಾಗಿಸುವುದಾದರೂ ಹೇಗೆ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನೆ ಮಾಡಿದರು.ರೈತರಿಗೆ ಎಕರೆಗೆ ಕನಿಷ್ಠ 2.50 ಕೋಟಿ ನೀಡಿ:
ಮುಖಂಡ ಮಾಚನಹಳ್ಳಿ ಜಯಣ್ಣ ಮಾತನಾಡಿ, ಹಣ ಹಾಗೂ ಅಧಿಕಾರ ಇರುವವರಿಗೆ ಕೆಐಎಡಿಬಿ ನೋಟಿಫಿಕೇಷನ್ ಆದ ಮೇಲೂ ಭೂ ಪರಿವರ್ತನೆ ಮಾಡಿಕೊಟ್ಟಿದ್ದು, ರಿಜಿಸ್ಟರ್ ಮಾಡಲು ಅನುವು ಮಾಡಿಕೊಡಲಾಗಿದೆ. ಆದರೆ ರೈತರಿಗೆ ಕನಿಷ್ಠ ಮಾಹಿತಿ ನೀಡಲು ಕಚೇರಿಗೆ ಅಲೆದಾಡಿಸುತ್ತಾರೆ. ರೈತರಿಗೆ ಎಕರೆಗೆ ಕನಿಷ್ಠ 2.50 ಕೋಟಿ ಪರಿಹಾರ ನೀಡಿ ಎಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಗ್ರಾಮಗಳ ಅಭಿವೃದ್ದಿಗೆ ಹಾಗೂ ಸ್ಮಶಾನಕ್ಕಾಗಿ ಜಾಗ ಮಂಜೂರು ಮಾಡಿಕೊಡಬೇಕೆಂದು ಹಲವು ರೈತರು ಆಗ್ರಹಿಸಿದರು.ಸಭೆಯಲ್ಲಿ ತಹಸೀಲ್ದಾರ್ ಅಮೃತ್ ಅತ್ರೇಶ್, ಉಪ ತಹಸೀಲ್ದಾರ್ ಶಶಿಧರ್, ರಾಜಸ್ವ ನಿರೀಕ್ಷಕ ಕುಮಾರಸ್ವಾಮಿ, ವಿಎಗಳಾದ ಬಾಲಕೃಷ್ಣ, ಗೋಪಾಲ್, ಲೋಕೇಶ್, ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ, ಕಾರ್ಯಪಾಲಕ ಅಭಿಯಂತರರಾದ ಲೀಲಾವತಿ ಭಾಗವಹಿಸಿದ್ದರು.
1.40 ಕೋಟಿ ಹಣ ನೀಡಲು ತೀರ್ಮಾನ:ಜಿಲ್ಲಾಧಿಕಾರಿ ಡಾ.ಶಿವಶಂಕರ್ ಮಾತನಾಡಿ ರೈತರಿಗೆ ತಮ್ಮ ಭೂಮಿಗೆ ಹಣ ಕೇಳಲು ಹಕ್ಕಿದೆ. ಆದರೆ ಸರ್ಕಾರದ ನಿಯಮಗಳ ಪ್ರಕಾರ ಮೂರು ಗ್ರಾಮಗಳ ಸರಾಸರಿ ಭೂ ಮೌಲ್ಯವನ್ನು ಲೆಕ್ಕಹಾಕಿ, ನಮ್ಮ ಇತಿಮಿತಿಯೊಳಗೆ 1.40 ಕೋಟಿ ರು.ಗಳನ್ನು ನೀಡಲು ತೀರ್ಮಾನಿಸಿದ್ದೇವೆ.-ಡಾ.ಶಿವಶಂಕರ್, ಜಿಲ್ಲಾಧಿಕಾರಿ, ಬೆಂ.ಗ್ರಾ.