ಸಾರಾಂಶ
ಹಾನಗಲ್ಲ ತಾಲೂಕಿನ ೮೬ ಸರಕಾರಿ ಶಾಲೆ ವಸತಿ ನಿಲಯ ಸೇರಿದಂತೆ ವಿವಿಧೆಡೆ ೫ ಸಾವಿರ ಸಸಿ ನೆಡುವ ಹಾಗೂ ವಿವಿಧ ಶಾಲೆಗಳಲ್ಲಿ ಉಚಿತ ನೋಟ್‌ಬುಕ್ ವಿತರಣೆ ಮೂಲಕ ಶಾಸಕ ಶ್ರೀನಿವಾಸ ಮಾನೆ ಅವರ ೫೦ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗದಿಂದ ಆಚರಿಸಲಾಯಿತು.
ಹಾನಗಲ್ಲ: ತಾಲೂಕಿನ ೮೬ ಸರಕಾರಿ ಶಾಲೆ ವಸತಿ ನಿಲಯ ಸೇರಿದಂತೆ ವಿವಿಧೆಡೆ ೫ ಸಾವಿರ ಸಸಿ ನೆಡುವ ಹಾಗೂ ವಿವಿಧ ಶಾಲೆಗಳಲ್ಲಿ ಉಚಿತ ನೋಟ್‌ಬುಕ್ ವಿತರಣೆ ಮೂಲಕ ಶಾಸಕ ಶ್ರೀನಿವಾಸ ಮಾನೆ ಅವರ ೫೦ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಶ್ರೀನಿವಾಸ ಮಾನೆ ಅವರು, ಹಾನಗಲ್ಲ ತಾಲೂಕಿನ ಹಿತಕ್ಕಾಗಿ ನಿತ್ಯ ನಿರಂತರ ಹೊಸ ಹೊಸ ಯೋಜನೆಗಳನ್ನು ನೀಡಿ ಕೃಷಿಕರು, ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಸಾರ್ವಜನಿಕರ ಹಿತ ಕಾಯಲು ಮುಂದಾಗಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಶ್ರೀನಿವಾಸ್ ಮಾನೆ ಅವರ ಅಭಿಮಾನಿ ಬಳಗದ ಸಹಭಾಗಿತ್ವದಲ್ಲಿ ತಾಲೂಕಿನಾದ್ಯಂತ ಕೃಷಿ ಹೊಂಡ ನಿರ್ಮಾಣ, ಕೆರೆ ಹೂಳೆತ್ತುವುದು, ಕೊಳವೆಬಾವಿಗಳ ಮರು ಪೂರಣ, ಉದ್ಯಾನವನಗಳ ಅಭಿವೃದ್ಧಿಗೆ ಮುಂದಾಗಿದೆ. ಶ್ರೀನಿವಾಸ್ ಮಾನೆ ಅವರ ೫೦ನೇ ಹುಟ್ಟು ಹಬ್ಬದ ನಿಮಿತ್ತ ಪ್ರಸ್ತುತ ವರ್ಷವಿಡೀ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿಸುವ ಉದ್ದೇಶ ನಮ್ಮದಾಗಿದೆ ಎಂದರು.ಈಗ ತಾಲೂಕಿನಲ್ಲಿ ಏಕಕಾಲಕ್ಕೆ ೮೬ ಸ್ಥಳಗಳಲ್ಲಿ ಹಣ್ಣಿನ ಗಿಡಗಳು, ಕಡಿಮೆ ಶ್ರಮ, ನೀರಿನ ನಿರ್ವಹಣೆಯಲ್ಲಿ ಬೆಳೆಯಬಹುದಾದ ಗಿಡಗಳನ್ನು ನೆಡಲಾಗಿದೆ. ಅಲ್ಲದೆ ಈ ನೆಟ್ಟ ಗಿಡಗಳನ್ನು ಜೋಪಾನ ಮಾಡಿ ಉತ್ತಮವಾಗಿ ಬೆಳೆಸುವಲ್ಲಿಯೂ ಕಾಳಜಿ ವಹಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಟಾಕನಗೌಡ ಪಾಟೀಲ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ನೆಲ್ಲಿಬೀಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಂಗ್ರೆಸ್ ನಾಯಕ, ನ್ಯಾಯವಾದಿ ಉಮೇಶ ಗೌಳಿ ಅವರು ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಶೈಕ್ಷಣಿಕವಾಗಿ ಹಾನಗಲ್ಲ ತಾಲೂಕನ್ನು ಅತ್ಯಂತ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮಹದಾಸೆ ಶಾಸಕ ಶ್ರೀನಿವಾಸ ಮಾನೆ ಅವರದ್ದಾಗಿದೆ. ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಐಎಎಸ್, ಕೆಎಎಸ್, ಸಿಇಟಿ, ಸೈನ್ಯ ತರಬೇತಿ, ಸ್ಪೋಕನ್ ಇಂಗ್ಲಿಷ್ ಸೇರಿದಂತೆ ಉಚಿತ ಶಿಕ್ಷಣ ಹಾಗೂ ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ವಿಜ್ಞಾನ ಪ್ರಯೋಗಕ್ಕಾಗಿ ಸೌಲಭ್ಯಗಳನ್ನು ಒದಗಿಸಿ ಉಪಕರಿಸಿದ್ದಾರೆ. ಸರಕಾರದ ಯೋಜನೆಗಳ ಹೊರತಾಗಿಯೂ ತಮ್ಮ ಸ್ವಂತ ಖರ್ಚು ಹಾಗೂ ವಿವಿಧ ಕಂಪನಿಗಳ ಸಹಯೋಗದಲ್ಲಿ ಇಂತಹ ಸಮಾಜೋಪಯೋಗಿ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮಂಜು ಗೌರಣ್ಣನವರ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ಭದ್ರಾವತಿ, ಶಿವು ತಳವಾರ ಸೇರಿದಂತೆ ನೂರಾರು ಕಾರ್ಯಕರ್ತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.