ಬಿಜೆಪಿ ವಿರುದ್ಧ ಅಹಿಂದ ಸಂಘಟನೆಗಳ ಆಕ್ರೋಶ

| Published : Aug 08 2024, 01:33 AM IST

ಬಿಜೆಪಿ ವಿರುದ್ಧ ಅಹಿಂದ ಸಂಘಟನೆಗಳ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಶೋಷಿತ ಹಾಗೂ ಎಲ್ಲ ವರ್ಗದ ನಾಯಕರಾದ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಅಹಿಂದ ಎಂಬ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿಸಲು ಕೇಂದ್ರ ಸರ್ಕಾರ ಸೇರಿದಂತೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಅಹಿಂದ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶೋಷಿತ ಹಾಗೂ ಎಲ್ಲ ವರ್ಗದ ನಾಯಕರಾದ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಅಹಿಂದ ಎಂಬ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿಸಲು ಕೇಂದ್ರ ಸರ್ಕಾರ ಸೇರಿದಂತೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಅಹಿಂದ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಿ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಏಳು ಕೋಟಿ ಜನರ ಸರ್ಕಾರ. 136 ಜನ ಶಾಸಕರನ್ನು ಜನ ಗೆಲ್ಲಿಸಿದ್ದಾರೆ. ಹೀಗಾಗಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿರುವ ಸಂವಿಧಾನಿಕ ಸರ್ಕಾರ ನಮ್ಮದು. ಆದರೆ ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ದೂರು ಕೊಟ್ಟ ವ್ಯಕ್ತಿಯ ಹಿನ್ನೆಲೆ ನೋಡಬೇಕಾಗಿತ್ತು. ಬೆಳಗ್ಗೆ 11 ಗಂಟೆಗೆ ದೂರು ನೀಡಿದರೆ ರಾತ್ರಿ 10 ಗಂಟೆ ಒಳಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ ಇದು ಕಾನೂನು ಬಾಹಿರ. ಹೀಗಾಗಿ ರಾಜ್ಯಪಾಲರು ತಾವು ನೀಡಿದ ನೊಟೀಸ್ ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಬಿಜೆಪಿ ಪದೇ ಪದೇ ಸುಳ್ಳನ್ನು ಹೇಳುವ ಮೂಲಕ ಸುಳ್ಳನ್ನೇ ಸತ್ಯ ಮಾಡಲು ಹೊರಟಿದೆ. ಬಿಜೆಪಿ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದಲ್ಲಿ ಜನರಿಗೆ ಮೋಸ ಮಾಡಲು ಬಿಜೆಪಿ ಸನ್ನದ್ಧ ವಾಗಿದೆ. ಇದರ ಮೊದಲ ಹಂತವಾಗಿ ಸರ್ಕಾರ ಅಸ್ತಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜನಪರ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರದ ಜನಪ್ರಿಯತೆ ಸಹಿಸದ ಬಿಜೆಪಿ ರಾಜ್ಯಸರ್ಕಾರಕ್ಕೆ ಸಂಕಷ್ಟ ತರಲು ಹಾಗೂ ಸಿಎಂ ಸಿದ್ಧರಾಮಯ್ಯ ಅವರಿಗೆ ಅಪಮಾನ ಮಾಡಲು ಪ್ರಯತ್ನಿಸುತ್ತಿವೆ. ಹೀಗಾಗಿ ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಅಹಿಂದ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ಸಾಧ್ಯವಿಲ್ಲ. ಈ ಹೋರಾಟದ ಮುಂದುವರಿದ ಭಾಗವಾಗಿ ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಭಾಗವಹಿಸಿ ಸರ್ಕಾರಕ್ಕೆ ಆತ್ಮಸ್ಥೈರ್ಯ ತುಂಬುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಸಿದ್ದರಾಮಯ್ಯ ಜನಪರ ಆಡಳಿತ ನೀಡುವ ಜೊತೆಗೆ ಪ್ರತಿ ಮನೆಗೆ ತಲುಪುವ ಕಾರ್ಯಕ್ರಮ ರೂಪಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿ ಜನರ ದಿಕ್ಕುತಪ್ಪಿಸಲು ಸುಳ್ಳು ಹೇಳುತ್ತಿದೆ. ಬಿಜೆಪಿ, ಜೆಡಿಎಸ್ ಸೇರಿ ಮೂಡಾ ಹಗರಣ ಸೃಷ್ಟಿಸಿ ಆರೋಪ ಮಾಡುತ್ತಿದ್ದಾರೆ. ಅವರ ಪಾದಯಾತ್ರೆ ಕೇವಲ ರಾಜಕೀಯ ಪ್ರೇರಿತ ವಾಗಿದೆ ಎಂದರು.

ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದ ವಿರುದ್ಧ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೋಡೆತ್ತು ಗಳಂತೆ ಹೋರಾಟ ರೂಪಿಸಿದ್ದರು. ಇದೇ ಕಾರಣದಿಂದಲೇ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದರು. ಈಗಲೂ ನಾವು ಒಗ್ಗಟ್ಟಾಗಿದ್ದೇವೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರಿಗೆ ಅನುಕೂಲ ಒದಗಿಸು ವುದನ್ನು ಬಿಟ್ಟು ರಾಜಕೀಯ ಕಾರಣಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಮೂಲಭೂತವಾದಿಗಳು ಕೇಂದ್ರ ಸರ್ಕಾರವನ್ನು ಬಳಸಿಕೊಂಡು ರಾಜ್ಯ ಪಾಲರ ಮೂಲಕ ನೊಟೀಸ್ ಕೊಡಿಸಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಸ್ತಿರಗೊಳಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಎಚ್.ದೇವರಾಜ್, ಮಂಜೇಗೌಡ, ರೇಖಾ ಹುಲಿಯಪ್ಪ ಗೌಡ, ಪ್ರಮುಖರಾದ ಮರ್ಲೆ ಅಣ್ಣಯ್ಯ, ಡಿ.ಸಿ ಪುಟ್ಟೇಗೌಡ, ಕೆ.ಎಂ ಮಂಜುನಾಥ್, ನಾರಾಯಣ, ರಮೇಶ್, ಔರಂಗ ಪಾಷ, ಮುನೀರ್, ಪರಮೇಶ್, ಮಲ್ಲೇಶ್‌ಸ್ವಾಮಿ, ಜೇಮ್ಸ್ ಡಿಸೋಜ ಹಾಗೂ ಕಾರ್ಯಕರ್ತರು ಇದ್ದರು.ಪೋಟೋ ಫೈಲ್‌ ನೇಮ್‌ 7 ಕೆಸಿಕೆಎಂ 4

ಸಿಎಂ ಸಿದ್ದರಾಮಯ್ಯ ಪರವಾಗಿ ಚಿಕ್ಕಮಗಳೂರಿನಲ್ಲಿ ಅಹಿಂದ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಮೆರವಣಿಗೆ ನಡೆಸಿದರು.