ಕನ್ನಡಪ್ರಭ ವಾರ್ತೆ ಲೋಕಾಪುರ
ಹೈನುಗಾರಿಕೆಯು ಮಹಿಳೆಯರ ಸಬಲೀಕರಣ, ಸ್ವಾವಲಂಬನೆಗೆ ಸಹಕಾರಿಯಾಗಿದೆ ಎಂದು ವಿಜಯಪುರ-ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಈರನಗೌಡ ಕರಿಗೌಡರ ಹೇಳಿದರು.ಸಮೀಪದ ಭಂಟನೂರ ನವಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ನಿಮ್ಮ ಪ್ರೋತ್ಸಾಹದಿಂದ ಒಕ್ಕೂಟ ಬೆಳೆಯಲು ಸಹಕಾರಿಯಾಗುತ್ತದೆ. ಒಕ್ಕೂಟದಿಂದ ಮಾ.11ರಿಂದ ಎಮ್ಮೆಯ ಪ್ರತಿ ಲೀಟರ್ ಹಾಲಿಗೆ ₹೫ ಪ್ರೋತ್ಸಾಹ ನೀಡಲು ನಿರ್ಮಾನಿಸಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡ ಹಣಮಂತ ತಿಮ್ಮಾಪುರ ಮಾತನಾಡಿ, ಮುಧೋಳ ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಂಟನೂರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಸಹಕಾರ ತತ್ವದಡಿ ಮುನ್ನಡೆಯುತ್ತಿದ್ದು, ಈಗ ನವಗ್ರಾಮದಲ್ಲಿ ಪ್ರಾರಂಭಗೊಂಡ ಸಂಘ ಇತರ ಸಂಘಗಳಂತೆ ಅಗತ್ಯ ಸೌಲಭ್ಯ ಹೊಂದಬೇಕೆಂದರು.ವಿಜಯಪುರ-ಬಾಗಲಕೋಟೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಶಿವಶಂಕರಸ್ವಾಮಿ ಮಾತನಾಡಿ, ಹೈನುಗಾರಿಕೆಗೆ ಎಲ್ಲಾ ರೀತಿಯ ಸಹಾಯಧನ, ಸಹಕಾರ, ವೈದ್ಯಕೀಯ ಸೌಲಭ್ಯವನ್ನು ಒಕ್ಕೂಟದಿಂದ ಪಡೆದುಕೊಳ್ಳಿ. ಸಂಘದಲ್ಲಿ ಪಾರದರ್ಶಕ ಆಡಳಿತ ನಡೆಸಬೇಕಾದರೆ ಆಡಳಿತಾತ್ಮಕ ತರಬೇತಿ ಪಡೆಯಬೇಕು. ಹೈನುಗಾರಿಕೆ ಹಾಗೂ ಕೃಷಿ ಒಂದೇ ನಾಣ್ಯದ ಎರಡು ಮುಖಗಳು. ಹೈನುಗಾರಿಕೆ ಮಾಡುವ ಕುಟುಂಬ ಕನಿಷ್ಠ ಒಂದು ಹಸು, ಕರು, ದನವನ್ನಾದರೂ ಸಾಕಿ ನಿಮಗೆ ಬೆನ್ನೆಲುಬಾಗಿ ಒಕ್ಕೂಟ ಇದೇ ಎಂದು ಹೇಳಿದರು.
ಒಕ್ಕೂಟದ ನಿರ್ದೇಶಕರಾದ ಸಿದ್ದಲಿಂಗೇಶ ಕೊಲಾರ, ವಿವೇಕಾನಂದ ಪಾಟೀಲ, ಲಕ್ಷ್ಮಣ ಮಾಲಗಿ, ಮಹಿಳಾ ಸಂಘದ ಅಧ್ಯಕ್ಷತೆ ಯಮನಪ್ಪ ದೊಳ್ಳನವರ, ಬಾಗಲಕೋಟೆ ಉಪವಿಭಾಗದ ಉಪವ್ಯವಸ್ಥಾಪಕ ಪರಶುರಾಮ ಜಾಡರ, ವಿಸ್ತೀರ್ಣಾಧಿಕಾರಿ ಶ್ರೀದೇವಿ ಗುರವ, ಬಿಎಂಸಿ ಕಾರ್ಯದರ್ಶಿ ಸಂಗಪ್ಪ ಕಟಗೇರಿ, ಲಕ್ಷ್ಮಣ ಸೊನ್ನದ, ಹಣಮಂತ ಅಮಲಝರಿ, ನಾಗಪ್ಪ ಬಸುನಾಯಕ, ವೀರಪ್ಪ ಸೊನ್ನದ, ಮಹಿಳಾ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.