ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಜಾತ್ರಾ ಸಮಯದಲ್ಲಿ ಎತ್ತಿನಗಾಡಿ ಮುಂದೆ ತಮಟೆ ಹೊಡೆಯಲು ನಿರಾಕರಿಸಿ ದಲಿತ ವ್ಯಕ್ತಿಯೊಬ್ಬರಿಗೆ ಸವರ್ಣೀಯರು ಹಲ್ಲೆ ನಡೆಸಿದ ಪರಿಣಾಮ ಆ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಅಪ್ಪಾಜಿಹಳ್ಳಿಯಲ್ಲಿ ನಡೆದಿದೆ. ನಾಗರಾಜು (43) ಗಾಯಗೊಂಡವರು.ಆಗಿದ್ದೇನು? : ಜು.17 ಏಕಾದಶಿ ಹಬ್ಬದ ಹಿನ್ನೆಲೆಯಲ್ಲಿ ಅಪ್ಪಾಜಿಹಳ್ಳಿ ಇತರೇ ಸುತ್ತಮುತ್ತಲ ಗ್ರಾಮಗಳಲ್ಲಿ ಶ್ರೀ ವೀರಚೆನ್ನಯ್ಯ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಜಾತ್ರೆ ಪ್ರಯುಕ್ತ ಸಂಪ್ರದಾಯದಂತೆ ಎತ್ತಿನ ಗಾಡಿಗಳನ್ನು ಶೃಂಗಾರಗೊಳಿಸಿ ಅಪ್ಪಾಜಿಹಳ್ಳಿ ಗ್ರಾಮದ ಹೊರವಲಯದ ದೇವಸ್ಥಾನದ ಸುತ್ತ ಮೆರವಣಿಗೆ ಕಾರ್ಯಕ್ರಮ ನಡೆಸಲಾಗುತಿತ್ತು. ಈ ವೇಳೆ ಅದೇ ಗ್ರಾಮದ ಕೆಲವರು ನಾಗರಾಜು ಮತ್ತು ನರೇಶ್ ಎನ್ನುವರಿಗೆ 400 ಹಣ ರು.ನೀಡಿ ಮೆರವಣಿಗೆ ಹೊರಟಿದ್ದ ಎತ್ತಿನಗಾಡಿಗೆ ತಮಟೆ ಹೊಡೆಯುವಂತೆ ಸೂಚಿಸಿದ್ದರು. ಅದರಂತೆ ತಮಟೆ ಹೊಡೆಯಲು ನಾಗರಾಜು ಹಾಗೂ ನರೇಶ ರೆಡಿಯಾಗಿದ್ದರು. ಆಗ ಸ್ಥಳಕ್ಕೆ ಬಂದ ಮೊತ್ತೊಂದು ಸಮುದಾಯದ ಜನರು ನಮ್ಮ ಎತ್ತಿನಗಾಡಿ ಮುಂದೆ ತಮಟೆ ಹೊಡೆಯುವಂತೆ ಆಹ್ವಾನ ನೀಡಿದರು. ಆಗ ನಾಗರಾಜು ನಾವು ಈಗಾಗಲೇ ಬೇರೆಯವರಿಂದ ಹಣ ಪಡೆದಿದ್ದೇವೆ. ಅವರ ಎತ್ತಿನಗಾಡಿಯ ಮೆರವಣಿಗೆ ಮುಗಿಸಿದ ಬಳಿಕ ನಿಮ್ಮ ಎತ್ತಿನಗಾಡಿಯ ಮೆರವಣಿಗೆಗೆ ಆಗಮಿಸಿ ತಮಟೆ ಹೊಡೆಯುತ್ತೇವೆ ಎಂದು ಹೇಳಿದ್ದರು.ರಾತ್ರಿ ಮೆರವಣಿಗೆ ಕಾರ್ಯಕ್ರಮ ಮುಗಿದ ಮೇಲೆ ನಾಗರಾಜು ಮೇಲೆ ಆಹ್ವಾನ ನೀಡಲು ಬಂದಿದ್ದವರು ಜಗಳ ತೆಗೆದು ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾಗರಾಜು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.