ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದಕ್ಕೆ ಕೇಂದ್ರ ಜಲ ಆಯೋಗ ಆರೆಂಜ್ ಅಲರ್ಟ್‌ನ ಎಚ್ಚರಿಕೆ ನೀಡಿದೆ.

ಮಲೆನಾಡು ಭಾಗದಲ್ಲಿ ನಿರಂತರ ಮಳೆ ಪರಿಣಾಮ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಭಾನುವಾರ ಆರೆಂಜ್ ಅಲರ್ಟ್‌ನ ನೀಡಿದ್ದು, ಸಂಬಂಧಿತ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ತುಂಗಾ ನದಿ ನೀರಿನ ಮಟ್ಟ 619.16 ಮೀ. ದಾಖಲಾಗಿದೆ. ಇದು ಅಪಾಯದ ಮಟ್ಟವಾದ 618.00 ಮೀ. 1.16 ಮೀ. ಹೆಚ್ಚಾಗಿದೆ. ನದಿ ತೀವ್ರ ಪ್ರವಾಹ ಪರಿಸ್ಥಿತಿಯಲ್ಲಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳು ಹಾಗೂ ಕೃಷಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

2019ರಲ್ಲಿ ಸುರಿದ ಭಾರೀ ಮಳೆಯಿಂದ ತುಂಗಾ 619.865 ಮೀ. ಹರಿದಿತ್ತು. ಅದಕ್ಕೆ ಹೋಲಿಸಿದರೆ 0.71 ಮೀ. ಅಷ್ಟೇ ಕಡಿಮೆ ಇದೆ ಎಂದು ತಿಳಿಸಿದೆ.


ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ ತುಂಗಾ ನದಿಯ ನೀರಿನ ಮಟ್ಟ 567.33 ಮೀ. ದಾಖಲಾಗಿದ್ದು, ಇದು ಅಪಾಯದ ಮಟ್ಟವಾದ 567.25 ಮೀ.ಗಿಂತ 0.08 ಮೀ. ಹೆಚ್ಚಾಗಿದೆ. ನದಿ ವೇಗವಾಗಿ ಏರಿಕೆಯಾಗುತ್ತಿರುವ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಮಹಿಷಿ ಪ್ರದೇಶದಲ್ಲೂ ತುಂಗಾ ನದಿ ಅಪಾಯದ ಮಟ್ಟ ಮೀರಿದೆ. ಮಧ್ಯಾಹ್ನ 12 ಗಂಟೆಗೆ 595.73 ಮೀ. ನೀರಿನ ಮಟ್ಟ ದಾಖಲಾಗಿದೆ. ಇದು ಅಪಾಯದ ಮಟ್ಟಕ್ಕಿಂತ 1.73 ಮೀ. ಹೆಚ್ಚಾಗಿದೆ. ನೀರಿನ ಮಟ್ಟದಲ್ಲಿ ತ್ವರಿತ ಏರಿಕೆ ಕಂಡುಬರುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ. ---ಕೋಟ್‌----

ಸಿಡಬ್ಲ್ಯೂಸಿ ವರದಿಯಲ್ಲಿ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಆ ಪ್ರಕಾರ ನದಿ ಅಕ್ಕ-ಪಕ್ಕದಲ್ಲಿ ವಾಸಿಸುವವರಿಗೆ ಎಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ನಿರಂತರ ನಿಗಾ ವಹಿಸುತ್ತಿದ್ದಾರೆ.

- ಭನ್ವರ್‌ ಸಿಂಗ್ ಮೀನಾ, ಜಿಲ್ಲಾಧಿಕಾರಿ, ಚಿಕ್ಕಮಗಳೂರು