ಚಿಕ್ಕಮಗಳೂರು ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವದ ಎರಡನೇ ದಿನವಾದ ಬುಧವಾರದಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ವೈಭವದಿಂದ ನಡೆಯಿತು.
- ಮೆರಗು ನೀಡಿದ ಕಲಾ ತಂಡಗಳು, ನಿರೀಕ್ಷೆಯಷ್ಟು ಬರಲಿಲ್ಲ ದತ್ತಭಕ್ತರು । ಇಂದು ದತ್ತಪೀಠದಲ್ಲಿ ದತ್ತ ಜಯಂತಿಗೆ ತೆರೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವದ ಎರಡನೇ ದಿನವಾದ ಬುಧವಾರದಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ವೈಭವದಿಂದ ನಡೆಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿತ್ತು. ಆದರೆ, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಶೋಭಾಯಾತ್ರೆಯಲ್ಲಿ ದತ್ತಮಾಲಾಧಾರಿಗಳ ಸಂಖ್ಯೆ ಇಳಿಮುಖವಾಗಿತ್ತು.ನ.26 ರಂದು ದತ್ತಭಕ್ತರು ದತ್ತಮಾಲೆ ಧರಿಸಿದ್ದು, 8 ದಿನಗಳ ಕಾಲ ವ್ರತ ಆಚರಿಸಿ ಬುಧವಾರ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ದತ್ತಮಾಲಾಧಾರಿಗಳು ಚಿಕ್ಕಮಗಳೂರು ನಗರದ ಬಸವನಹಳ್ಳಿ, ನಾರಾಣಾಪುರ ಸುತ್ತಮುತ್ತಲಿನ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಪಡಿಯನ್ನು ಇರುಮುಡಿ ಕಟ್ಟಿಕೊಂಡು ಗುರುವಾರ ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆದು ಇರುಮುಡಿಯನ್ನು ಗುಹೆಯ ಹೊರ ಭಾಗದಲ್ಲಿ ಸಮರ್ಪಿಸಲಿದ್ದಾರೆ.
ಬೆಳಿಗ್ಗೆ ಪಡಿ ಸಂಗ್ರಹ ಕಾರ್ಯ ನಡೆಯುತ್ತಿದ್ದಂತೆ ಇತ್ತ ನಗರಾದ್ಯಂತ ಯುವಕರು ಬೈಕ್‌ಗಳಿಗೆ ಭಗವಧ್ವಜ ಕಟ್ಟಿಕೊಂಡು ಸಿಟಿ ರೌಂಡ್ಸ್ ಮಾಡುತ್ತಿದ್ದರು. ಬೈಕ್‌ಗಳ ಕರ್ಕಶ ಸದ್ದು ಅವರಿಗೆ ಖುಷಿ ತಂದಿದ್ದರೆ, ವಯೋ ವೃದ್ಧರೂ ಸೇರಿದಂತೆ ಸಾಮಾನ್ಯ ಜನರಿಗೆ ಕಿರಿಕಿರಿಯಾಗುತ್ತಿತ್ತು.ಮಧ್ಯಾಹ್ನ ಹೊರಟ ಯಾತ್ರೆನಿಗಧಿತ ಸಮಯಕ್ಕೆ ಸರಿಯಾಗಿ ಅಂದರೆ, ಮಧ್ಯಾಹ್ನ 3.30ಕ್ಕೆ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಶೋಭಾ ಯಾತ್ರೆ ಹೊರಟಿತು. ಈ ಯಾತ್ರೆಯಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಶಾಸಕ ವಿ. ಸುನೀಲ್ ಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಆನಂದ್ ಗುರೂಜಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಶ್ರೀ ಕಾಮಧೇನು ಗಣಪತಿ ದೇಗುಲದಿಂದ ಹೊರಟ ಶೋಭಾಯಾತ್ರೆ ಟೌನ್ ಕ್ಯಾಂಟಿನ್ ಸರ್ಕಲ್, ಕೆಬಿಇ ವೃತ್ತ, ಬಸವನ ಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಿ ಸಂಜೆ 5.30 ರ ವೇಳೆಗೆ ಹನುಮಂತಪ್ಪ ವೃತ್ತ ತಲುಪಿತು. ಕಲಾ ತಂಡಗಳು, ಯುವಕರ ಜೈಕಾರದ ಘೋಷಣೆಗಳು, ಶೋಭಾಯಾತ್ರೆ ಮೆರಗು ಹೆಚ್ಚಳ ಮಾಡಿತ್ತು. ಡಿಜೆ ಸದ್ದಿಗೆ ಯುವಕ, ಯುವತಿಯರು ಹೆಜ್ಜೆ ಹಾಕಿದರು. ಈ ವೈಭವ ನೋಡಲು ವೃತ್ತದ ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನಿಂತು ಈ ವೈಭವವನ್ನು ನೋಡಿದರು. ಹನುಮಂತಪ್ಪ ವೃತ್ತದಿಂದ ಎಂ.ಜಿ. ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ ಆಜಾದ್ ಪಾರ್ಕ್ ವೃತ್ತದಲ್ಲಿ ಮುಕ್ತಾಯಗೊಂಡಿತು.ಶೋಭಾಯಾತ್ರೆ ಸಾಗುವ ಮಾರ್ಗದ ಉದ್ದಕ್ಕೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಯಿಂದಲೇ ಪೊಲೀಸರು ಹೈ ಅಲರ್ಟ್ ಆಗಿದ್ದರು. ವಾಹನಗಳ ನಿಲುಗಡೆ ನಿಷೇಧಿಸಲಾಗಿತ್ತು. ಹಲವು ಕಡೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು.
-- ಬಾಕ್ಸ್--ಇಂದು ಉತ್ಸವಕ್ಕೆ ತೆರೆ:ಚಂದ್ರದ್ರೋಣ ಪರ್ವತಗಳ ಶ್ರೇಣಿಯಲ್ಲಿರುವ ದತ್ತಪೀಠದಲ್ಲಿ ಗುರುವಾರ ದತ್ತ ಜಯಂತಿ ಉತ್ಸವ ನಡೆಯಲಿದೆ. ಈ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಲು ಸಾವಿರಾರು ದತ್ತಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸಲಿದ್ದಾರೆ.
ಬೆಳಿಗ್ಗೆ ವಾಹನಗಳಲ್ಲಿ ಆಗಮಿಸುವ ಭಕ್ತರು, ದತ್ತಪೀಠಕ್ಕೆ ತೆರಳಿ ಸರದಿ ಸಾಲಿನಲ್ಲಿ ನಿಂತು ದತ್ತಗುಹೆಯೊಳಗೆ ಪ್ರವೇಶಿಸಿ ದತ್ತಪಾದುಕೆಗಳ ದರ್ಶನ ಪಡೆದು, ಅಲ್ಲಿಂದ ನಿರ್ಗಮಿಸಲಿರುವ ಭಕ್ತರು ಪೀಠದ ಹೊರ ವಲಯದಲ್ಲಿ ನಿರ್ಮಾಣ ಮಾಡ ಲಾಗಿರುವ ಶಡ್‌ನಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ ನಂತರ ತಮ್ಮ ಊರುಗಳಿಗೆ ತೆರಳಲಿದ್ದಾರೆ.ಚಿಕ್ಕಮಗಳೂರಿನ ಗಿರಿ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಮೋಡ ಕವಿದ ವಾತಾವರಣ ಹಾಗೂ ಚಳಿ ಗಾಳಿ ಬೀಸುತ್ತಿತ್ತು. ಇದೇ ವಾತಾವರಣ ಗುರುವಾರ ಮುಂದುವರಿದರೆ ಪೀಠಕ್ಕೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಲಿದೆ ಎಂದು ಸಂಘಟನಾಕಾರರ ಲೆಕ್ಕಚಾರ. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವರ ಸಂಖ್ಯೆ ಕಡಿಮೆ ಇದ್ದರೆ ದತ್ತಪೀಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.
ಈವರೆಗೆ ಎರಡು ದಿನಗಳ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿವೆ. 3 ಕೆಸಿಕೆಎಂ 4ದತ್ತ ಜಯಂತಿ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಬುಧವಾರ ಶೋಭಾಯಾತ್ರೆ ನಡೆಯಿತು.