ಸಾರಾಂಶ
ಲಕ್ಷ್ಮೇಶ್ವರ: ಗೋವಾ, ಮಂಗಳೂರು, ಉಡುಪಿ ಕಡೆ ಗುಳೆ ಹೋಗುವ ಕೂಲಿ ಕಾರ್ಮಿಕ ದಂಪತಿಯ ಪುತ್ರಿ ರವೀನಾ ಸೋಮಪ್ಪ ಲಮಾಣಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಎರಡನೇ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅದರಹಳ್ಳಿಯ ಬಡ ಕೂಲಿಕಾರರಾದ ಸೋಮಪ್ಪ ಲಮಾಣಿ, ರೇಣವ್ವ ಲಮಾಣಿ ದಂಪತಿಗಳು ತಾವು ಕೂಲಿ ಕೆಲಸಕ್ಕೆ ಹೋಗುವಾಗ ಮಗಳ ಶಿಕ್ಷಣಕ್ಕೆ ವ್ಯತ್ಯಯವಾಗಬಾರದೆಂದು ಧಾರವಾಡದ ಪ್ರತಿಷ್ಠಿತ ಕೆ.ಇ. ಬೋರ್ಡ್ ಕಾಲೇಜಿಗೆ ಸೇರಿಸಿದ್ದರು. ಓದಿನಲ್ಲಿ ಪ್ರತಿಭಾವಂತೆಯಾದ ರವೀನಾ ಕಷ್ಟಪಟ್ಟು ಓದಿ ರಾಜ್ಯಕ್ಕೇ ಎರಡನೇ ಸ್ಥಾನ ಪಡೆದಿದ್ದಾಳೆತಂದೆ-ತಾಯಿ ಕಷ್ಟಪಟ್ಟು ದುಡಿಯುತ್ತಿರುವುದನ್ನು ರವೀನಾ ನಿತ್ಯ ನೋಡುತ್ತಿದ್ದಾಳೆ. ಹೀಗಾಗಿ ತಾನು ಓದಬೇಕು ಎನ್ನುವ ಛಲ ಮೂಡಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರವೀನಾ, ಧಾರವಾಡದ ಕೆ.ಇ. ಬೋರ್ಡ್ ಕಾಲೇಜಿನಲ್ಲಿ ಕಲಿತು ಪ್ರತಿನಿತ್ಯ 10-12 ಗಂಟೆ ಅಭ್ಯಾಸ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 595 ಅಂಕ ಪಡೆದಿದ್ದಾಳೆ.
ರವೀನಾ ಕನ್ನಡ-99, ಹಿಂದಿ-98, ಇತಿಹಾಸ -100, ಭೂಗೋಳಶಾಸ್ತ್ರ -100, ರಾಜ್ಯಶಾಸ್ತ್ರ -100, ಶಿಕ್ಷಣ ಶಾಸ್ತ್ರ 98 ಅಂಕ ಗಳಿಸಿದ್ದಾಳೆ.ರವೀನಾ ಲಮಾಣಿ ಬಿಡುವಿನ ವೇಳೆಯಲ್ಲಿ ತಂದೆ-ತಾಯಿ ಜತೆ ಹೊಲದಲ್ಲಿ ಕೆಲಸ ಮಾಡುತ್ತಾಳೆ. ಈ ಮೂಲಕವೂ ಕುಟುಂಬಕ್ಕೆ ನೆರವಾಗುತ್ತಾಳೆ.
ಈ ಕುರಿತು ರವೀನಾ ಪ್ರತಿಕ್ರಿಯಿಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಠಿಣ ಪರಿಶ್ರಮದಿಂದ ಓದಲು ಆರಂಭಿಸಿದ್ದೆ. ಮನೆಯಲ್ಲಿನ ಬಡತನ ನನಗೆ ಓದಲು ಪ್ರೇರೇಪಿಸಿತ್ತು. ತಂದೆ ತಾಯಿಗಳು ಪಡುತ್ತಿದ್ದ ಕಷ್ಟಗಳನ್ನು ನೆನೆದು ಪ್ರತಿನಿತ್ಯ ಓದುವ ಹವ್ಯಾಸ ರೂಢಿಸಿಕೊಂಡಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಇದರಿಂದ ನನಗೆ ತುಂಬಾ ಖುಷಿ ಆಗುತ್ತಿದೆ ಎಂದು ಹೇಳಿದರು.ಮನೆಯ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿರುವುದರಿಂದ ವಿದ್ಯಾಭ್ಯಾಸ ಬಿಟ್ಟುಬಿಡಬೇಕು ಎಂದು ನಿರ್ಧರಿಸಿದ್ದೆ. ಅದನ್ನು ತಂದೆ ತಾಯಿಗೆ ಹೇಳಿದೆ. ಆದರೆ ಅವರು ಒಪ್ಪಲಿಲ್ಲ, ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಬಿಡಬೇಡ, ಸಾಲ ಮಾಡಿಯಾದರೂ ಓದಿಸುತ್ತೇವೆ ಎಂದು ಧೈರ್ಯ ತುಂಬಿದರು. ಅದರ ಪರಿಣಾಮ ಈಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಬಂದಿದೆ, ಮುಂದೆ ಇನ್ನಷ್ಟು ಸಾಧನೆ ಮಾಡಬೇಕೆಂಬ ಹುಮ್ಮಸ್ಸು ಬಂದಿದೆ.
ಮುಂದೆ ಪದವಿ ಓದಿ ಬಳಿಕ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದುಕೊಂಡಿದ್ದೇನೆ. ನಮ್ಮ ಆರ್ಥಿಕ ಸ್ಥಿತಿಯಲ್ಲಿ ಇದು ಕಷ್ಟ ಸಾಧ್ಯ. ಯಾರಾದರೂ ಸಹಾಯ ಮಾಡಿದರೆ ನಾನು ಕಂಡ ಕನಸು ನನಸಾಗುತ್ತದೆ ಎಂದುಕೊಂಡಿದ್ದೇನೆ ಎಂದು ರವೀನಾ ಲಮಾಣಿ ಹೇಳಿದರು.