ನಾನಾ ಕಚೇರಿಗಳಿಗೆ ಡಿಸಿ ಭೂಬಾಲನ್‌ ಭೇಟಿ, ಪರಿಶೀಲನೆ

| Published : Jan 25 2024, 02:00 AM IST

ನಾನಾ ಕಚೇರಿಗಳಿಗೆ ಡಿಸಿ ಭೂಬಾಲನ್‌ ಭೇಟಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜನರು ಮಧ್ಯವರ್ತಿಗಳ ಮೂಲಕ ತಮ್ಮ ಕೆಲಸಗಳನ್ನು ಮಾಡಿಕೊಳ್ಳದೇ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಡಿಸಿ ಭೂಬಾಲನ್‌ ಸೂಚನೆ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ತಹಸೀಲ್ದಾರ ಕಚೇರಿ, ಉಪನೋಂದಣಿ ಕಚೇರಿ, ಭೂದಾಖಲೆಗಳ ಕಚೇರಿ, ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಬಾಕಿಯಿರುವ ಕಂದಾಯ ಪ್ರಕರಣಗಳ ಬಗ್ಗೆ ತಹಸೀಲ್ದಾರರಿಂದ ಮಾಹಿತಿ ಪಡೆದುಕೊಂಡರು. ನಂತರ ಉಪನೋಂದಣಿ ಅಧಿಕಾರಿ ಕಚೇರಿಗೆ ಭೇಟಿ ನೀಡಿದಾಗ ಹೆಚ್ಚು ಜನರು ಕಂಡು ಎಲ್ಲರೂ ಕಚೇರಿ ಕೆಲಸಕ್ಕೆ ಬಂದವರೋ ಅಥವಾ ಬೇರೆ ಜನರು ಇರುವರೋ ಎಂದು ಸಂದೇಹ ಬಂದು ಎಲ್ಲರ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿದರು.

ಉಪನೋಂದಣಾಧಿಕಾರಿ ದ್ಯಾವಪ್ಪ ಅವರಿಗೆ ಕಚೇರಿಯಲ್ಲಿ ಆಸ್ತಿ ಮಾರಾಟಗಾರರು, ಖರೀದಾರರು, ಸಾಕ್ಷಿದಾರರು ಹಾಗೂ ದಾಖಲಾತಿಗೆ ಸಂಬಂಧಿಸಿದವರು ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಜನರು ಇರದಂತೆ ನೋಡಿಕೊಳ್ಳಬೇಕೆಂದು ಖಡಕ್ಕಾಗಿ ಸೂಚನೆ ನೀಡಿದರು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜನರು ಮಧ್ಯವರ್ತಿಗಳ ಮೂಲಕ ತಮ್ಮ ಕೆಲಸಗಳನ್ನು ಮಾಡಿಕೊಳ್ಳದೇ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಜನರಿಗೆ ಹೇಳಿದರು.

ಭೂಮಾಪನ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಅವರು, ರಿಕಾರ್ಡ್ ರೂಂ ಪರಿಶೀಲಿಸಿದ ನಂತರ ಸೀಟ್ ಸ್ಕ್ಯಾನಿಂಗ್ ಮಾಡುವುದನ್ನು ಪರಿಶೀಲಿಸಿದರು.

ಪಟ್ಟಣದ ಇವಣಗಿ ರಸ್ತೆಯಲ್ಲಿರುವ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕಸ ವಿಲೇವಾರಿ ಘಟಕ ಪರಿಶೀಲಿಸಿದರು. ನಂತರ ಪುರಸಭೆ ಮುಖ್ಯಾಧಿಕಾರಿಗಳಿಂದ ಘನತ್ಯಾಜ್ಯ ವಿಲೇವಾರಿ ಘಟಕದ ಮಾಹಿತಿ ಪಡೆದುಕೊಂಡರು. ಜತೆಗೆ ಕಸವನ್ನು ಸರಿಯಾಗಿ ಸಂಸ್ಕರಿಸುವಂತೆ ಕ್ರಮ ವಹಿಸಬೇಕು. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ತಯಾರಾಗುವ ಗೊಬ್ಬರಕ್ಕೆ ಸೂಕ್ತ ದರ ನಿಗದಿಪಡಿಸಿ ರೈತರಿಗೆ ಗೊಬ್ಬರ ಮಾರಾಟ ಮಾಡಬೇಕು. ಪುರಸಭೆಯು ವಿವಿಧ ತೆರಿಗೆ ತುಂಬುವ ಬಗ್ಗೆ, ಅಂಗಡಿಕಾರರು ತಮ್ಮ ಅನುಮತಿ ಪತ್ರದ ನವೀಕರಣ ಮಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರಿಗೆ ಸೂಚಿಸಿದರು.

ಮಿನಿವಿಧಾನಸೌಧದ ಆವರಣದಲ್ಲಿರುವ ಶೌಚಾಲಯ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ಸುದ್ದಿಗಾರರು ತಂದಾಗ, ಜನರಿಗೆ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿಯೇ ತಹಸೀಲ್ದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಗ್ರೇಡ್-೨ ತಹಸೀಲ್ದಾರ ಜಿ.ಎಸ್.ನಾಯಕ, ಎಡಿಎಲ್‌ಆರ್ ಬಿ.ಬಿ.ವಗ್ಗಣ್ಣನವರ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಪುರಸಭೆ ವ್ಯವಸ್ಥಾಪಕ ವಿರೇಶಹಟ್ಟಿ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ ಇತರರು ಇದ್ದರು.