ಕೆಲಸಕ್ಕೆ ಬರಬೇಡಿ ಎಂದರೆ ನಮ್ಮ ಪಾಡೇನು?

| Published : Jan 25 2024, 02:00 AM IST

ಸಾರಾಂಶ

ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯ 22 ಗುತ್ತಿಗೆ ಪೌರಕಾರ್ಮಿಕರನ್ನು ಕೆಲಸದಿಂದ ದೀಢಿರ್ ಕೈ ಬಿಡಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಮಂಗಳವಾರ ಪೌರಕಾರ್ಮಿಕರು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪ.ಪಂ. ಮುಖ್ಯಾಧಿಕಾರಿ ಜತೆ ವಾಗ್ವಾದ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಇಲ್ಲಿನ ಪಟ್ಟಣ ಪಂಚಾಯಿತಿಯ 22 ಗುತ್ತಿಗೆ ಪೌರಕಾರ್ಮಿಕರನ್ನು ಕೆಲಸದಿಂದ ದೀಢಿರ್ ಕೈ ಬಿಡಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಮಂಗಳವಾರ ಪೌರಕಾರ್ಮಿಕರು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪ.ಪಂ. ಮುಖ್ಯಾಧಿಕಾರಿ ಜತೆ ವಾಗ್ವಾದ ನಡೆಸಿದರು.

ಸುಮಾರು 22ಕ್ಕೂ ಹೆಚ್ಚು ಪೌರ ಕಾರ್ಮಿಕರು ಮೂರ್ನಾಲ್ಕು ವರ್ಷಗಳಿಂದ ಪ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ. ಇಂದು ಏಕಾಏಕಿ ಕೆಲಸಕ್ಕೆ ಬರಬೇಡಿ ಎಂದರೆ ನಮ್ಮ ಬದುಕಿನ ಪಾಡೇನು? ಇಲ್ಲಿಯವರೆಗೆ ಮಾಡಿದ ಕೆಲಸಕ್ಕೆ ಸರಿಯಾಗಿ ಸಂಬಳವನ್ನೇ ನೀಡಿಲ್ಲ. ಅಲ್ಲದೇ, ಅಧಿಕಾರಿಗಳು ಶಾಮೀಲಾಗಿ ನಮ್ಮ ಬದಲಿಗೆ ಬೇರೆಯವರನ್ನು ನೇಮಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಇದ್ದ ಅಧಿಕಾರಿಯೊಬ್ಬರಿಗೆ ನಮ್ಮನು ಕಾಯಂ ಮಾಡಿಕೊಳ್ಳಿ ಎಂದು ಒಂದಷ್ಟು ಹಣವನ್ನು ನೀಡಿ ಮೋಸ ಹೋಗಿದ್ದೇವೆ. ಇಂದು ಹಣ ಪಡೆದ ಅಧಿಕಾರಿಯೂ ಇಲ್ಲ, ಇತ್ತ ಕೆಲಸವು ಕಾಯಂ ಆಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಮಹಿಳಾ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ, ಕಣ್ಣಿರು ಸುರಿಸಿದರು.

ಪ.ಪಂ. ಮುಖ್ಯಾಧಿಕಾರಿ ಬಸವರಾಜ್ ಜೊತೆ ಮಾತನಾಡಿದ ಮುಖಂಡ ಆರ್.ಉಮೇಶ್, ಸಮಸ್ಯೆಯನ್ನು ಮೂಲದಿಂದ ಸರಿ ಪಡಿಸಬೇಕು. ಕಾರ್ಮಿಕರು ನಾಲ್ಕೈದು ವರ್ಷಗಳಿಂದ ನಮ್ಮೂರಿನಲ್ಲಿ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ. ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಕಾರ್ಮಿಕರು ಕೆಲಸ ಮಾಡಲಿಲ್ಲ ಎಂದರೆ ಪ.ಪಂ ಕಸದ ಗೂಡಾಗುತ್ತದೆ. ಕಾರ್ಮಿಕರು ಮಾಮೂಲಿಯಂತೆ ಸ್ವಚ್ಛತಾ ಕೆಲಸ ಮಾಡಲಿ. ಪಪಂ ಯಾವುದಾದರು ಮೂಲದಿಂದ ಕಾರ್ಮಿಕರಿಗೆ ಸಂಬಳವನ್ನು ನೀಡುವ ವ್ಯವಸ್ಥೆ ಮಾಡಲಿ ಎಂದು ಮನವಿ ಮಾಡಿದರು.

ಪ.ಪಂ. ಮುಖ್ಯಾಧಿಕಾರಿ ಬಸವರಾಜ್ ಮಾತನಾಡಿ, ಪೌರ ಕಾರ್ಮಿಕರ ಸಮಸ್ಯೆ ಜಿಲ್ಲಾಧಿಕಾರಿ ಗಮನಕ್ಕೂ ಇದೆ. ಪ.ಪಂ.ಗೆ ಪೌರ ಕಾರ್ಮಿಕರ ನೇರ ನೇಮಕಾತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದವರಿಗೆ ಮೊದಲು ಆದ್ಯತೆ ನೀಡಲಾಗುವುದು. ಅದರಂತೆ ಹಿಂದಿನಿಂದಲೂ ಕೆಲಸ ಮಾಡಿಕೊಂಡು ಬರುತ್ತಿರುವ ಪೌರ ಕಾರ್ಮಿಕರಿಗೆ ಪ.ಪಂ.ನಲ್ಲಿ ಸ್ವಚ್ಛತೆಯ ಕೆಲಸ ಮಾಡಿದ ಅನುಭವದ ಪ್ರತಿ ನೀಡಿ, ನೇಮಕಾತಿ ಹಂತಕ್ಕೆ ಸಹಕಾರ ನೀಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸಹ್ಯಾದ್ರಿ ಹರೀಶ್, ಶಂಕರಪ್ಪ, ರಾಜು ಇತರರಿದ್ದರು.

- - - -24ಎಚ್‍ಎಚ್‍ಆರ್.ಪಿ05:

ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜೊತೆ ವಾಗ್ವಾದ ನಡೆಸುತ್ತಿರುವ ಕೆಲಸ ಕಳೆದುಕೊಂಡ ಪೌರ ಕಾರ್ಮಿಕರು.