ಬಿಎಂಟಿಸಿ ಬಸ್ಸಲ್ಲಿ ಪ್ರಯಾಣಿಸುವಅಪ್ರಾಪ್ತ ಮಕ್ಕಳ ಮೇಲೆ ನಿಗಾ

| Published : Jan 25 2024, 02:00 AM IST

ಬಿಎಂಟಿಸಿ ಬಸ್ಸಲ್ಲಿ ಪ್ರಯಾಣಿಸುವಅಪ್ರಾಪ್ತ ಮಕ್ಕಳ ಮೇಲೆ ನಿಗಾ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಂಟಿಸಿ ಬಸ್‌ಗಳಲ್ಲಿ ಓಡಾಡುವ ಅಪ್ರಾಪ್ತ ಮಕ್ಕಳ ಬಗ್ಗೆ ನಿಗಾ ವಹಿಸಲು ಬಸ್‌ ಚಾಲಕರು, ನಿರ್ವಾಹಕರಿಗೆ ಅಧಿಕಾರಿಗಳು ಆದೇಶ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿ ಬಸ್‌ಗಳಲ್ಲಿ ಒಂಟಿಯಾಗಿ ಸಂಚರಿಸುವ ಅಪ್ರಾಪ್ತ ಮಕ್ಕಳ ಮೇಲೆ ನಿಗಾವಹಿಸುವಂತೆ ಚಾಲಕರು ಮತ್ತು ನಿರ್ವಾಹಕರಿಗೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶಿಸಿದ್ದಾರೆ.

ಇತ್ತೀಚೆಗೆ ವೈಟ್‌ಫೀಲ್ಡ್‌ನಲ್ಲಿ 12 ವರ್ಷದ ಬಾಲಕ ಪೋಷಕರಿಗೆ ತಿಳಿಸದೆ ಬಿಎಂಟಿಸಿ ಬಸ್‌ ಮೂಲಕ ಪ್ರಯಾಣಿಸಿ ನಾಪತ್ತೆಯಾಗಿದ್ದ. ಈ ಕುರಿತಂತೆ ಬಾಲಕನ ಪೋಷಕರು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗೆ ಮಾಹಿತಿ ನೀಡಿದ್ದರು. ನಂತರ ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಬಾಲಕ ಹೈದರಾಬಾದ್‌ನಲ್ಲಿ ಇರುವುದನ್ನು ಪತ್ತೆ ಮಾಡಿ ವಾಪಾಸು ಕರೆತಂದಿದ್ದರು. ಈ ಪ್ರಕರಣದ ನಂತರ ಬಿಎಂಟಿಸಿ ಬಸ್‌ಗಳಲ್ಲಿ ಅಪ್ರಾಪ್ತ ಮಕ್ಕಳು ಅನುಮಾನಾಸ್ಪದವಾಗಿ ಪ್ರಯಾಣಿಸುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯವು ಬಿಎಂಟಿಸಿಗೆ ಸೂಚನೆ ನೀಡಿತ್ತು.

ಆ ಸೂಚನೆ ಮೇರೆಗೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಮ್ಮ ಚಾಲಕ ಮತ್ತು ನಿರ್ವಾಹಕರಿಗೆ ಕೆಲವೊಂದು ಸೂಚನೆ ನೀಡಿದ್ದಾರೆ. ಅದರಂತೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಅಪ್ರಾಪ್ತ ಮಕ್ಕಳ ಮೇಲೆ ನಿಗಾವಹಿಸಬೇಕು. ಒಂದು ವೇಳೆ ಆ ಮಕ್ಕಳ ಹಾವಭಾವದಲ್ಲಿ ಬದಲಾವಣೆಯಿದ್ದರೆ, ಕೂಡಲೇ ಆ ಮಗುವಿನೊಂದಿಗೆ ಮಾತನಾಡಿ ಪೋಷಕರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಮಕ್ಕಳು ಉತ್ತರಿಸದಿದ್ದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು ಅಥವಾ ಹತ್ತಿರದ ಪೊಲೀಸ್‌ ಠಾಣೆಗೆ ಮಗುವನ್ನು ಕರೆದೊಯ್ದು ಬಿಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.