ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಹಾಗೂ ಇತರೆ ಚುನಾವಣಾ ವಿಷಯಗಳ ಕುರಿತು ಚರ್ಚಿಸುವ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಂಗಳವಾರ ಸುದೀರ್ಘ ಚರ್ಚೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ 2024 ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಮಾಹೆಯಲ್ಲಿ ಕೈಗೊಂಡು ಕೊಡಗು ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು 2025 ರ ಜ.6 ರಂದು ಪ್ರಕಟಿಸಲಾಗಿದೆ ಎಂದರು.
‘ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 552 ಮತಗಟ್ಟೆಗಳು ಇದ್ದು, ಜಿಲ್ಲೆಯಲ್ಲ್ಲಿ ಒಟ್ಟು 4,74,376 ಮಂದಿ ಮತದಾರರು ಇದ್ದಾರೆ. ಇದರಲ್ಲಿ 2,32,042 ಮಂದಿ ಪುರುಷ ಮತದಾರರು, 2,42,321 ಮಂದಿ ಮಹಿಳಾ ಮತದಾರರು ಮತ್ತು 13 ಇತರೆ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.ಪ್ರಸ್ತುತ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬಹುದು. ಮರಣ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ಕೈಬಿಡಲು ನಮೂನೆ-7 ರಲ್ಲಿ ಅರ್ಜಿ ಸಲ್ಲಿಸಬಹುದು. ಮತದಾರರ ಗುರುತಿನ ಚೀಟಿಯಲ್ಲಿ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿಗಾಗಿ, ಹೆಸರು ವರ್ಗಾವಣೆಗಾಗಿ ನಮೂನೆ-8 ರಲ್ಲಿ ಅರ್ಜಿ ಸಲ್ಲಿಸಬಹುದು. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6 ಎ ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ನಮೂನೆ 6, 6ಎ, 7 ಮತ್ತು 8ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆ್ಯಪ್‌ಗೂ http://voters.eci.gov.in/ ವೋಟರ್ಸ್ ಸರ್ವೀಸ್ ಪೋರ್ಟಲ್ ಮೂಲಕ ಆನ್‌ಲೈನ್ ನಲ್ಲಿ ನೇರವಾಗಿ ಸಲ್ಲಿಸಬಹುದು ಎಂದರು.ಮತದಾರರ ಪಟ್ಟಿಯನ್ನು ನಮೂದುಗಳ ಕುರಿತು ಮತದಾರರ ನೋಂದಣಾಧಿಕಾರಿ ಅವರ ಆದೇಶದ ವಿರುದ್ಧ ಜಿಲ್ಲಾಧಿಕಾರಿಗೆ ಪ್ರಜಾ ಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 24(ಎ) ರಂತೆ ಮೊದಲನೇ ಮೇಲ್ಮನವಿಯನ್ನು ಸಲ್ಲಿಸಬಹುದು.
ಮೊದಲನೇ ಮೇಲ್ಮನವಿ ಪ್ರಾಧಿಕಾರದ ಆದೇಶದ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 24(ಬಿ) ರಂತೆ ಮುಖ್ಯ ಚುನಾವಣಾಧಿಕಾರಿಗಳಿಗೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಬಹುದು.ಮತದಾರರ ಪಟ್ಟಿ ಮತ್ತು ಚುನಾವಣೆಯ ಕುರಿತು ಮತದಾರರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಭಾರತ ಚುನಾವಣಾ ಆಯೋಗವು ಮತದಾರರ ಸಹಾಯವಾಣಿ ಆ್ಯಪ್ ಬಿಡುಗಡೆಗೊಳಿಸಿದ್ದು, ಈ ಆ್ಯಪ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ವೆಂಕಟ್ ರಾಜಾ ಅವರು ನುಡಿದರು.
ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಬಿಎಲ್‌ಎಗಳನ್ನು ನಿಯೋಜಿಸಿ ಪಟ್ಟಿಯನ್ನು ಸಲ್ಲಿಸಬಹುದು. ಸಭೆಯಲ್ಲಿ ಹಾಜರಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾರರ ಪಟ್ಟಿ ಚುನಾವಣೆಗಳು ಹಾಗೂ ಚುನಾವಣಾ ಕಾನೂನುಗಳ ಕುರಿತು ಯಾವುದೇ ದೂರು, ಸಲಹೆ ಸೂಚನೆಗಳು ಇದ್ದಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು.ಭಾರತ ಚುನಾವಣಾ ಆಯೋಗದ https://www.eci.gov.in/ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ www.ceokarnataka.kar.nic.in ಮತ್ತು ಜಿಲ್ಲಾ ಚುನಾಣಾಧಿಕಾರಿಗಳ https://kodagu.nic.in/ ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ತೆನ್ನಿರಾ ಮೈನಾ(ಕಾಂಗ್ರೆಸ್) ಅವರು ಬೂತ್ ಮಟ್ಟದ ಏಜೆಂಟರನ್ನು ಈಗಾಗಲೇ ನೇಮಿಸಲಾಗಿದ್ದು, ಅಪ್‌ಡೇಟ್ ಮಾಹಿತಿ ಒದಗಿಸಲಾಗುವುದು ಎಂದರು.ಅರುಣ್(ಬಿಜೆಪಿ), ಗುಲಾಬಿ ಜನಾರ್ಧನ(ಜೆಡಿಎಸ್), ರಮೇಶ್(ಸಿಪಿಐಎಂ) ಅವರು ಮತದಾರರ ಪಟ್ಟಿ, ಮತಗಟ್ಟೆ ಕೇಂದ್ರಗಳು ಮತ್ತಿತರ ಸಂಬಂಧ ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.
ಚುನಾವಣಾ ಗುರುತಿನ ಚೀಟಿ, ಬೂತ್ ಮಟ್ಟದ ಏಜೆಂಟರ ಪಟ್ಟಿ ಮತ್ತಿತರ ಸಂಬಂಧ ಚುನಾವಣಾ ಆಯೋಗದ ಮಾರ್ಗಸೂಚಿ ಜೊತೆಗೆ ಆರ್‌ಪಿಐ ಕಾಯ್ದೆ ಪಾಲಿಸುವುದು ಮತ್ತಿತರ ಸಂಬಂಧ ಚರ್ಚಿಸಿದರು. ಹಾಗೆಯೇ ನಮೂನೆ-6, 7 ಮತ್ತು 8 ಮತದಾರರ ಪಟ್ಟಿಗೆ ಸೇರಿಸುವುದು, ತೆಗೆದುಹಾಕುವುದು, ಸ್ಥಳಾಂತರ ಮತ್ತಿತರ ಸಂಬಂಧ ಮಾಹಿತಿ ಪಡೆದರು.ಹದಿನೆಂಟು ವರ್ಷ ಮೇಲ್ಪಟ್ಟವರು ಮತದಾರರ ಗುರುತಿನ ಚೀಟಿ ಪಡೆಯುವುದು ನಿರಂತರ ಪ್ರಕ್ರಿಯೆಯಾಗಿದ್ದು, ಆ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳು ಗಮನಹರಿಸಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಬಳಿಕ ಗ್ರಾಮ ಪಂಚಾಯತ್ ಚುನಾವಣೆಯು ಸಹ ಹತ್ತಿರದಲ್ಲಿದೆ. ಕಾಲ ಕಾಲಕ್ಕೆ ಮಾಹಿತಿ ಅಪ್‌ಡೇಟ್ ಆಗಬೇಕು. ಆ ದಿಸೆಯಲ್ಲಿ ರಾಜಕೀಯ ಪಕ್ಷಗಳು ಜಿಲ್ಲಾಡಳಿತದ ಜೊತೆ ಸಹಕರಿಸುವಂತೆ ಕೋರಿದರು.ಮತದಾರರ ಗುರುತಿನ ಚೀಟಿ ಕಲ್ಪಿಸುವ ಸಂಬಂಧ ಕಳೆದ ಬಾರಿ ಹಾಡಿಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡು ಮತದಾರರ ಗುರುತಿನ ಚೀಟಿ ಕಲ್ಪಿಸಲು ಶ್ರಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಬೂತ್ ಮಟ್ಟದ ಏಜೆಂಟರ ಪಟ್ಟಿಯನ್ನು ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.