ಸಾರಾಂಶ
ರೋಣ: ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧ್ಯಕ್ಷತೆಯಲ್ಲಿ ಜರುಗಿದ ರೋಣ ತಾಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಅಹವಾಲುಗಳು ಸರ್ವೇ ಇಲಾಖೆಗೆ ಸಂಬಂಧಪಟ್ಟು ಸಲ್ಲಿಕೆಯಾಗಿವೆ.ಡಿಸಿ ವೈಶಾಲಿ ಎಂ.ಎಲ್. ಅವರು ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು. ಕೆಲವು ಡಿಡಿಎಲ್‌ಆರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಕಳುಹಿಸಿ, ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಡ.ಸ. ಹಡಗಲಿ ಗ್ರಾಮದ ರೈತ ಬಸನಗೌಡ ಪಾಟೀಲ ಅವರು ಜಮೀನಿಗೆ ತೆರುವ ರಸ್ತೆ ಗುರುತಿಸುವಂತೆ, ಜಿಗಳೂರ ಗ್ರಾಮದ ರೈತ ಆಸೀಫ್ ಜಮೀನು ನೋಂದಣಿಗೆ ಸಂಬಂಧಿಸಿದ ಅರ್ಜಿ, ಹೊನ್ನಾಪುರ ಗ್ರಾಮಸ್ಥರು ರುದ್ರಭೂಮಿಗೆ ತೆರಳುವ ರಸ್ತೆ ಅಳತೆ ಮಾಡುವಂತೆ, ಹೊನ್ನಾಪುರ ಗ್ರಾಮದ ರೈತ ಪೀರಸಾಬ್ ನದಾಫ್ ತಮ್ಮ ಜಮೀನಿಗೆ ತೆರಳುವ ರಸ್ತೆ ಅಳತೆ ಮಾಡುವಂತೆ ಮನವಿ ನೀಡಿದರು.ಅಬ್ಬಿಗೇರಿ ಗ್ರಾಮದ ರೈತ ಪ್ರಕಾಶ ಅವರು ತಮ್ಮ ಆರ್‌ಟಿಸಿಯಲ್ಲಿ ಬೇರೆಯವರ ಹೆಸರು ಸೇರ್ಪಡೆಯಾಗಿದ್ದು, ತಿದ್ದುಪಡಿ ಮಾಡಿಕೊಂಡುವಂತೆ ಕೋರಿದರು. ಸವಡಿ ಗ್ರಾಮದ ರೈತ ಮಹಿಳೆ ಮಲ್ಲವ್ವ ಪೂಜಾರ ಅವರು ತಮ್ಮ ಜಮೀನಿಗೆ ತೆರಳಲು ರಸ್ತೆ ಕಲ್ಪಿಸುವಂತೆ ಕೋರಿದರು. ಹೀಗೆ ಬಹುತೇಕ ಅರ್ಜಿಗಳು ಸರ್ವೆ ಇಲಾಖೆಗೆ ಸಂಬಂಧಿಸಿದ್ದವಾಗಿತ್ತು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸ್ಥಳದಲ್ಲಿದ್ದ ತಾಲೂಕು ಸರ್ವೇ ಅಧಿಕಾರಿ (ಎ.ಡಿ.ಎಲ್.ಆರ್.) ಗಿರೀಶ ಅವರಿಗೆ ರೈತರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು.ಹಿರೇಹಳ್ಳ ಪ್ರವಾಹದಿಂದ ನೀರು ಜಮೀನಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದ್ದು, ಈ ಸಮಸ್ಯೆ ಕಳೆದ 10 ವರ್ಷಗಳಿಂದ ಎದುರಾಗುತ್ತಿದೆ. ಈ ಕುರಿತು ಅನೇಕ ಬಾರಿ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರೂ ಈ ವರೆಗೂ ಕ್ರಮ ಕೈಗೊಂಡಿಲ್ಲ. ಜಮೀನಿಗೆ ನೀರು ನುಗ್ಗದಂತೆ ಹಿರೇಹಳ್ಳಕ್ಕೆ ತಡೆಗೋಡೆ ನಿರ್ಮಿಸಬೇಕು. ಜಮೀನಿನುದ್ದಕ್ಕೂ ಹಳ್ಳದ ಬದುವಿನಲ್ಲಿರುವ ಜಾಲಿಕಂಟಿ ತೆರುವು ಮಾಡಬೇಕು ಎಂದು ಸಂದಿಗವಾಡ ಗ್ರಾಮದ ರೈತ ಹನುಮಂತಪ್ಪ ದೊಡ್ಡಮನಿ ಅರ್ಜಿ ಸಲ್ಲಿಸಿದರು.
ಮಲ್ಲಾಪುರ ಗ್ರಾಮದಲ್ಲಿ ಅಕ್ರಮವಾಗಿ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದರಿಂದ ಕುಡುಕರ ಹಾವಳಿ ವಿಪರೀತವಾಗಿದೆ. ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮಲ್ಲಾಪುರ ಗ್ರಾಮದ ನೀಲಪ್ಪಗೌಡ ದಾನಪ್ಪಗೌಡ್ರ ಮನವಿ ಸಲ್ಲಿಸಿದರು.ಹೊನ್ನಾಪುರ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ, ವಿಶೇಷಚೇತನರಿಗಾಗಿ ಗ್ರಾಪಂ, ತಾಪಂ ಕಾಯ್ದಿರಿಸಿದ ಅನುದಾನದಲ್ಲಿ ಆದ್ಯತೆ ಕಲ್ಪಿಸಬೇಕು ಎಂದು ಬೆಳವಣಕಿ ಗ್ರಾಮದ ಅಂಗವಿಕಲ ಹನುಮಂತಪ್ಪ ಬಿಂಗಿ ಅರ್ಜಿ ಸಲ್ಲಿಸಿದರು. ಅಕ್ರಮ- ಸಕ್ರಮದಡಿ ಕೊಳವೆಬಾವಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಅಬ್ಬಿಗೇರಿ ಗ್ರಾಮದ ರೈತ ಶಿವಪ್ಪ ತಲ್ಲೂರ ಆಗ್ರಹಿಸಿದರು.
ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತಸುವಂತೆ ರವಿಕುಮಾರ ಬೋವಿ, ರೋಣ ಪುರಸಭೆಯಲ್ಲಿ ಅವಶ್ಯವುಳ್ಳ ಕಾಮಗಾರಿ ಬದಲಾಯಿಸುವಂತೆ ಪುರಸಭೆ ಉಪಾಧ್ಯಕ್ಷ ಮಿಥುನ್ ಪಾಟೀಲ, ಸದಸ್ಯರಾದ ದಾವಲ್‌ಸಾಬ್ ಬಾಡಿನ, ಮಲ್ಲಯ್ಯ ಮಹಾಪುರುಷಮಠ ಅರ್ಜಿ ಸಲ್ಲಿಸಿದರು.ಸವಡಿ ಗ್ರಾಮದಲ್ಲಿ ಜನತೆಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯ ಹಾಗೂ ಸ್ವಚ್ಛತೆಗೆ ಗ್ರಾಪಂ ಆದ್ಯತೆ ನೀಡಬೇಕು ಎಂದು ಎಸ್.ಎಸ್. ಸಂಗನಾಳ ಅರ್ಜಿ ಸಲ್ಲಿಸಿದರು. ಪಿಎಂ ಕಿಸಾನ್ ಹಣ ಬಿಡುಗಡೆಗೆ ಚಿಕ್ಕಮಣ್ಣೂರ ಗ್ರಾಮದ ಮಲ್ಲವ್ವ ಪಟ್ಟೇದ, ಮನೆ ಕಲ್ಪಿಸುವಂತೆ ಹೊನ್ನಪುರ ಗ್ರಾಮದ ವಿಶೇಷಚೇತನ ಪೀರಸಾಬ್ ರಾಜೂರ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸುವಂತೆ ಸಂದಿಗವಾಡ ಗ್ರಾಮದ ರೈತ ಯಮನಪ್ಪ ಮಸೂತಿ, ಪಡಿತರ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿಗಾಗಿ ರೋಣ ಪಟ್ಟಣದ ಸೈನಾಜಬೇಗಂ ದಳವಾಯಿ, ಬೆಳೆ ಹಾನಿ ಪರಿಹಾರ ಕುರಿತು ಹೊಸಳ್ಳಿ ಗ್ರಾಮದ ಈರಪ್ಪ ಮೇಟಿ, ರೋಣ ಪಟ್ಟಣದ, ದೊಡ್ಡಬಸಪ್ಪ ನವಲಗುಂದ, ಚಿಕ್ಕಮಣ್ಣೂರ ಗ್ರಾಮದ ರಾಮಚಂದ್ರಗೌಡ ಕೆಂಚನಗೌಡ್ರ ಅರ್ಜಿ ಸಲ್ಲಿಸಿದರು. ರೇಶನ್ ಕಾರ್ಡನಲ್ಲಿ ಹೆಸರು ತಿದ್ದುಪಡಿ ಮಾಡುವಂತೆ ಹೊಳೆಮಣ್ಣೂರ ಗ್ರಾಮದ ರಾಮಪ್ಪ ಸುಳ್ಳದ ಅರ್ಜಿ ಅಲ್ಲಿಸಿದರು.
ಜಿಪಂ ಸಿಇಒ ಭರತ ಎಸ್., ಎಸ್‌ಪಿ ಬಿ.ಎಸ್. ನೇಮಗೌಡ್ರ, ಎಸಿ ವೆಂಕಟೇಶ ನಾಯಕ, ತಹಸೀಲ್ದಾರ್ ನಾಗರಾಜ ಕೆ., ಬಿಇಒ ಆರ್.ಬಿ. ಹುರಳಿ, ಸಿಪಿಐ ಎಸ್.ಎಸ್. ಬಿಳಗಿ, ಬಸವರಾಜ ಅಂಗಡಿ ಉಪಸ್ಥಿತರಿದ್ದರು.