ಕಾಫಿನಾಡು ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಫೆ.1ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದ್ದು, ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಫೆ.1ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದ್ದು, ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಇಲ್ಲದೇ ಇದ್ದರೂ ಈ ಬಾರಿ ಮಾತ್ರ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ವಲ್ಪಮಟ್ಟಿಗೆ ರಾಜಕಾರಣ ಪ್ರವೇಶ ಪಡೆದಿತ್ತು. ಘಟಾನುಘಟಿ ನಾಯಕರುಗಳೇ ಸ್ಪರ್ಧೆ ಮಾಡಿದ್ದರಿಂದಾಗಿ ಚುನಾವಣಾ ಅಖಾಡ ರಂಗೇರಿತ್ತು. ಸಿ.ಟಿ.ರವಿ ಅವರ ಸ್ಪರ್ಧೆಯಿಂದ ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿತ್ತು.

ಅಂತಿಮವಾಗಿ ಬ್ಯಾಂಕ್‌ನ 13 ನಿರ್ದೇಶಕರ ಸ್ಥಾನದ ಪೈಕಿ 10 ಸ್ಥಾನಗಳನ್ನು ಬಿಜೆಪಿ, 2 ಸ್ಥಾನ ಬಿಜೆಪಿ ಮೈತ್ರಿ ಪಕ್ಷವಾದ ಜೆಡಿಎಸ್‌ ಅಭ್ಯರ್ಥಿಗಳು ಗೆಲವು ಸಾಧಿಸಿದ್ದವು. ಒಂದು ಸ್ಥಾನ ಮಾತ್ರ ಇತರೆ ಅಭ್ಯರ್ಥಿಯ ಪಾಲಾಗಿತ್ತು.

ಇದೀಗ ಬ್ಯಾಂಕ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಫೆ.1 ಎಂದು ಚುನಾವಣೆ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿ.ಟಿ.ರವಿ ಅವರು ಇದೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆದರೂ, ಸಿ.ಟಿ.ರವಿ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸುವ ಸಾಧ್ಯತೆ ದಟ್ಟವಾಗಿದೆ.

ಸಹಕಾರ ಕ್ಷೇತ್ರ ರಂಗದಲ್ಲಿ ಈಗಾಗಲೇ ಪಳಗಿರುವ ಬಿಜೆಪಿ ಬೆಂಬಲಿತರೇ ಆದ ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ತರೀಕೆರೆ ಮಾಜಿ ಶಾಸಕ ಸುರೇಶ್, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಹಾಗೂ ಜೆಡಿಎಸ್ ನಾಯಕ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರೂ ಗೆಲುವು ಸಾಧಿಸಿದ್ದಾರೆ.

ಆದರೆ, ಬೆಳ್ಳಿ ಪ್ರಕಾಶ್ ಈಗಾಗಲೇ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ತರೀಕೆರೆಯ ಸುರೇಶ್ ಈಗಾಗಲೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಎಸ್.ಎಲ್.ಭೋಜೇಗೌಡ ಅವರು ಜೆಡಿಎಸ್ ನಾಯಕರಾಗಿದ್ದು, ತಾವೂ ಸೇರಿದಂತೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯಲ್ಲಿ ಒಪ್ಪಂದದಂತೆ ಎರಡು ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲೂ ಗೆಲುವು ಸಾಧಿಸಿದ್ದಾರೆ. ಎರಡು ಸ್ಥಾನ ಗೆದ್ದಿರುವ ಜೆಡಿಎಸ್‌ಗೆ ಬಿಜೆಪಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಸಿ.ಟಿ.ರವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ:

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎರಡು ಸ್ಥಾನದಲ್ಲಿ ಗೆಲವು ಸಾಧಿಸಿದ ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಷ್ಟ್ರ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಯಾಗಿವೆ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾಗಿ ನಡೆದ ಅನುಕೂಲವಾಗಲಿದೆ ಎಂದು ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್‌ ಅಭ್ಯರ್ಥಿಗೆ ನೀಡುವುದಕ್ಕೆ ನಿರ್ಧರಿಸಲಾಗಿದೆ. ಈ ಉಪಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಜೆಡಿಎಸ್‌ನ ಸೋನಾಲ್ ಮುಂದಿದ್ದು, ಅವರಿಗೆ ಉಪಾಧ್ಯಕ್ಷ ಸ್ಥಾನ ಲಭಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಜ.31ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆ ಜ.31ಕ್ಕೆ ಜಿಲ್ಲೆಯ ಬಿಜೆಪಿ ಕೋರ್‌ ಕಮಿಟಿ ಸಭೆ ಕರೆಯಸಲಾಗಿದೆ. ಸಭೆಯಲ್ಲಿ ಬಹುತೇಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ತೀರ್ಮಾನವಾಗಲಿದೆ. ಈ ನಡುವೆ, ಸಿ.ಟಿ. ರವಿ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ಬೇರೆ ಅವರಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಕೂಗು ಸಹ ಕೇಳಿ ಬರುತ್ತಿದ್ದು, ಜ.31ಕ್ಕೆ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎನ್ನಲಾಗಿದೆ.