ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ, ಸಂವಿಧಾನದ ಒಲವಿನಂತೆ ಶಿಕ್ಷಣದಲ್ಲಿ ವೈಚಾರಿಕತೆ,

ಕನ್ನಡಪ್ರಭ ವಾರ್ತೆ ಮೈಸೂರುಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದ್ದರಿಂದ ಮಕ್ಕಳಿಗೆ ಉತ್ತಮ, ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಉನ್ನತ ಸ್ಥಾನಕ್ಕೇರುವಲ್ಲಿ ರೂಪಿಸುವ ಕಾರ್ಯಕ್ಕೆ ಶಿಕ್ಷಕರು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ .ಮಹದೇವಪ್ಪ ಕರೆ ನೀಡಿದರು.ಹೂಟಗಳ್ಳಿಯ ಕೆ.ಎಚ್.ಬಿಕಾಲೋನಿಯ ಸುದರ್ಶನ್ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಸುದರ್ಶನ್ ವಿದ್ಯಾಸಂಸ್ಥೆಯ ಮುಖ್ಯಸ್ಥರೂ ಆಗಿರುವ ಎನ್‌. ಶ್ರೀನಿವಾಸನ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಸಂಸ್ಥೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಸಮವಸ್ತ್ರ ಹಾಗೂ ಶೈಕ್ಷಣಿಕ ಸಾಮಾಗ್ರಿ ನೀಡಿ ಯಾವುದೇ ಜಾತಿ- ಧರ್ಮ ಬೇಧ, ತಾರತಮ್ಯವಿಲ್ಲದೇ ಎಲ್ಲಾ ವರ್ಗದ ಮಕ್ಕಳನ್ನು ಸಮಾನವಾಗಿ ಕಾಣುವ ಮೂಲಕ ಉನ್ನತ ಶಿಕ್ಷಣ ನೀಡುತ್ತಿರುವುದು ಎಲ್ಲರು ಮೆಚ್ಚುವಂತದ್ದು ಎಂದರು.ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ, ಸಂವಿಧಾನದ ಒಲವಿನಂತೆ ಶಿಕ್ಷಣದಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬಿತ್ತುವ ಮೂಲಕ ಮೂಢನಂಬಿಕೆಯಿಂದ ದೂರವಿರುವ ಬಗ್ಗೆ ಅರಿವು ಮೂಡಿಸಬೇಕು. ಶಿಕ್ಷಣ ಮಾತ್ರವೇ ಕತ್ತಲಿನಿಂದ ಬೆಳಕಿನಡೆಗೆ ಇರುವ ಮಾರ್ಗ. ಅಂತೆಯೇ ಗುಣಮಟ್ಟದ ಶಿಕ್ಷಣ ಕಲ್ಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿರುವ ಶ್ರೀನಿವಾಸನ್ ಅವರ ಶ್ರಮ ಅಪಾರ ಎಂದರು.ನಾನು ಇಂದೂ ಭಾರತೀಯ, ಎಂದೆಂದಿಗೂ ಭಾರತೀಯ ಎಂಬ ಸಂದೇಶವನ್ನು ನಮ್ಮ ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಬರೆದಿದ್ದಾರೆ. ಅಂತೆಯೇ ಶಿಕ್ಷಕರು ಮಕ್ಕಳಿಗೆ ನಾವು ಭಾರತೀಯರು, ನಾವೆಲ್ಲ ಒಂದೇ ಎಂಬ ಕುರಿತು ಬೋಧಿಸಿ ಅವರಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದಿಸಬೇಕೆಂಬ ನಿಯಮವನ್ನು ಆದೇಶಿಸಿ ಸರ್ಕಾರ ಈಗಾಗಲೇ ಜಾರಿಗೊಳಿಸಿದೆ. ಈ ಸಂಸ್ಥೆಯಲ್ಲೂ ಅದು ನಿರಂತರವಾಗಿ ನಡೆಯಲಿ. ನಾಗರೀಕತೆ, ಸನ್ನಡತೆಯನ್ನು ಮೈಗೂಡಿಸಿಕೊಂಡು ಶ್ರೀನಿವಾಸನ್ ಅವರು ಇಂತಹ ಸಂಸ್ಥೆಯನ್ನು ನಡೆಸುತ್ತಿದ್ದು, ಅವರ ಈ ಜವಾಬ್ದಾರಿಯುತ, ಉನ್ನತ ಕಾರ್ಯ ಹೀಗೆ ಮುಂದುವರೆಯಲ್ಲಿ. ಅದಕ್ಕೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಇದೇ ವೇಳೆ ಸಚಿವರು ಭರವಸೆ ನೀಡಿದರು.ಇದೇ ವೇಳೆ ಮಕ್ಕಳು ಪ್ರದರ್ಶಿಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಚೆನ್ನಮ್ಮ ಹಾಗೂ ರಾಯಣ್ಣ ಗಲ್ಲಿಗೇರುವ ಸಮಯದಲ್ಲೂ ತಮ್ಮ ನಾಡು- ನುಡಿ ಮತ್ತು ದೇಶಾಭಿಮಾನವನ್ನು ಬಿಟ್ಟುಕೊಡಲಿಲ್ಲ. ಮಕ್ಕಳು ದೇಶಾಭಿಮಾನವನ್ನು ಬೆಳೆಸಿಕೊಂಡು ನಾಡಿನ ಉತ್ತಮ ಪ್ರಜೆಗಳಾಗಿ ರೂಪುಗೊಂಡು, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರುವಂತಾಗಬೇಕು. ಸುದರ್ಶನ ವಿದ್ಯಾ ಸಂಸ್ಥೆ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಅವರು ಆಶಿಸಿದರು.ಸಂಸ್ಥೆ ಮುಖ್ಯಸ್ಥ ಎನ್. ಶ್ರೀನಿವಾಸನ್, ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಣ ಸಂಘದ ನೇಹಾ ಪ್ರಕಾಶ್, ಮುಖ್ಯೋಪಧ್ಯಾಯಿನಿ ವಿನೂತಾ ಮೊದಲಾದವರು ಇದ್ದರು.