ಕುಂದಾಪುರ: ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭಾನುವಾರ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಾಲಯದಲ್ಲಿ ಚಂಡಿಕಾಯ ಯಾಗ ನೆರವೇರಿಸಿದರು.ಶನಿವಾರ ರಾತ್ರಿ ಕೊಲ್ಲೂರಿಗೆ ಆಗಮಿಸಿದ್ದ ಡಾ. ಪರಮೇಶ್ವರ್ ಅವರನ್ನು ಭಾನುವಾರ ಮುಂಜಾನೆ ದೇವಾಲಯದ ವತಿಯಿಂದ ಪೂರ್ಣಕುಂಭಕಲಶದೊಂದಿಗೆ ಪುರೋಹಿತರು ಬರಮಾಡಿಕೊಂಡರು, ಬಳಿದ ಸಪತ್ನಿಕರಾಗಿ ದೇವಿ ದರ್ಶನ ಪಡೆದು, ಯಾಗದ ಸಂಕಲ್ಪ ಮಾಡಿದರು. ಯಾಗ ಪೂರ್ಣಗೊಂಡ ಬಳಿಕ ಪೂರ್ಣಾಹುತಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅವರನ್ನು ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಬಾಬು ಶೆಟ್ಟಿ ಗೌರವಿಸಿದರು. ಬಳಿಕ ಸಚಿವರು ದೇವಾಲಯದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ರಾಜ್ಯ ಮುಜರಾಯಿ ಇಲಾಖೆ ಆಯುಕ್ತ ಶರತ್ ಬಿ., ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಮತ್ತಿತರರು ಉಪಸ್ಥಿತರಿದ್ದರು.
ಮಾಸ್ಟರ್ ಪ್ಲ್ಯಾನ್ ಮಾಡುತ್ತೇವೆ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಪರಮೇಶ್ವರ್, ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೇಕಾಗುವ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸಲಾಗುತ್ತದೆ ಎಂದರು.
ಇಲ್ಲಿಗೆ ನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ, ಅವರಿಗೆ ಸಮರ್ಪಕವಾಗಿ ಪಾರ್ಕಿಂಗ್, ದೇವರ ದರ್ಶನ, ಪೂಜೆ ಮತ್ತು ಉಳಿದುಕೊಳ್ಳುವುದಕ್ಕೆ ವ್ಯವಸ್ಥೆಗಳಾಗಬೇಕಾಗಿವೆ, ಒಂದು ವಸತಿಗೃಹ ನಿರ್ಮಾಣಕ್ಕೂ ಬೇಡಿಕೆ ಇದೆ, ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಸಿದ್ಧಪಡಿಸಲಾಗುತ್ತದೆ ಎಂದರು.ಅತಿಕ್ರಮಣ ತೆರವಿಗೆ ಸೂಚನೆ: ಮುಜರಾಯಿ ಇಲಾಖೆಗೆ ಸೇರಿರುವ ಕೊಲ್ಲೂರು ದೇವಾಲಯದ ಭೂಮಿ ಅತಿಕ್ರಮಿಸಿಕೊಂಡಿರುವ ಬಗ್ಗೆ ದೂರುಗಳಿವೆ, ಈ ಬಗ್ಗೆ ಪರಿಶೀಲನೆ ನಡೆಸಿದ್ದೇನೆ ಮತ್ತು ಅತಿಕ್ರಮಿತ ಭೂಮಿ ತೆರವುಗೊಳಿಸುವಂತೆ ಮುಜರಾಯಿ ಆಯುಕ್ತರಿಗೆ ಮತ್ತು ಉಡುಪಿ ಜಿಲ್ಲಾಧಿಕಾರಿ ಅವರಿಗೆ ಆದೇಶಿಸಿದ್ದೇನೆ ಎಂದರು.ತಂತ್ರಿ ರಾಮಚಂದ್ರ ಅಡಿಗ, ಅರ್ಚಕ ಸುರೇಶ್ ಭಟ್, ಶ್ರೀಶ ಭಟ್ ಇದ್ದರು.ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತ ಶರತ್, ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್, ಹೆಚ್ಚುವರಿ ಎಸ್‌ಪಿ ಸುಧಾಕರ ನಾಯ್ಕ್, ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮುತ್ತುರಾಜ್ ತುಂಬಿಗೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಭಿಲಾಷ್ ಪಿ.ವಿ., ರಾಜೇಶ್ ಕಾರಂತ್, ರಘುರಾಮ್ ದೇವಾಡಿಗ, ಸುರೇಂದ್ರ ಶೆಟ್ಟಿ, ಸುಧಾ ಕೆ., ಧನಾಕ್ಷಿ ಪೂಜಾರಿ, ಮಹಾಲಿಂಗ ನಾಯ್ಕ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಹರಿಪ್ರಸಾದ್ ರೈ ಉಡುಪಿ, ರಾಜು ಎಸ್ ಪೂಜಾರಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮುಂತಾದವರು ಇದ್ದರು.