ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ನಗರಸಭೆಗೆ ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಕೈಬಿಡುವ ವಿಚಾರ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ, ಗೊರವನಹಳ್ಳಿ ಪಂಚಾಯ್ತಿಗಳನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ರೈತ ಮುಖಂಡರೊಂದಿಗೆ ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಂಚಾಯ್ತಿಗಳನ್ನು ನಗರಸಭೆಗೆ ಸೇರಿಸುವ ಸಂಬಂಧ ಈಗಾಗಲೇ ಕ್ಯಾಬಿನೆಟ್‌ನಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಹಂತದಲ್ಲಿ ಮತ್ತೆ ಅಧಿಸೂಚನೆ ಬದಲಾವಣೆಯಾಗಬೇಕಾದರೆ ಕ್ಯಾಬಿನೇಟ್‌ಗೆ ವಿಷಯ ತಂದು ಒಪ್ಪಿಗೆ ಪಡೆದು ಮತ್ತೊಂದು ಅಧಿಸೂಚನೆ ಹೊರಡಿಸಬೇಕಿದೆ. ಈ ಕುರಿತಂತೆ ಮುಖ್ಯಮಂತ್ರಿ ಎದುರು ರೈತರ ಅಹವಾಲುಗಳನ್ನು ಮುಂದಿಡುವ ಕೆಲಸ ಮಾಡುತ್ತೇನೆ. ಅವರು ಒಪ್ಪಿದರೆ ಮತ್ತೆ ಕ್ಯಾಬಿನೆಟ್‌ಗೆ ವಿಷಯ ಮಂಡಿಸುವುದಾಗಿ ಭರವಸೆ ನೀಡಿದರು.ರೈತ ಮುಖಂಡರು ತಾಳ್ಮೆ ವಹಿಸಬೇಕು. ಪ್ರತಿಭಟನೆಯನ್ನು ಕೈಬಿಟ್ಟು ಶಾಂತಿಯನ್ನು ಕಾಪಾಡಬೇಕು. ನಾನೂ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡುತ್ತೇನೆ. ಉಗ್ರ ಪ್ರತಿಭಟನೆಗಿಳಿಯದೆ ಸರ್ಕಾರದಿಂದ ಅಂತಿಮ ತೀರ್ಮಾನ ಬರುವವರೆಗೂ ಶಾಂತಿಯುತ ಪ್ರತಿಭಟನೆ ಮುಂದುವರೆಸುವುದಾಗಿ ಗ್ರಾಮಸ್ಥರು ಹೇಳಿದ್ದಾರೆ ಎಂದು ನುಡಿದರು.
ಶಾಸಕ ಕೆ.ಎಂ.ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಜರಿದ್ದರು.
ಪಂಚಾಯ್ತಿಗಳು ಪಂಚಾಯ್ತಿಗಳಾಗೇ ಉಳಿಯಲಿ: ಸುನಂದಾ ಜಯರಾಂ
ಕನ್ನಡಪ್ರಭ ವಾರ್ತೆ ಮದ್ದೂರುನಗರಸಭೆಗೆ ಗ್ರಾಮ ಪಂಚಾಯ್ತಿಗಳು ಸೇರ್ಪಡೆಗೊಳ್ಳುವುದಕ್ಕೆ ತೀವ್ರ ವಿರೋಧವಿದೆ. ಅದಕ್ಕಾಗಿ ಕಳೆದ ೫೦ ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಗ್ರಾಮ ಪಂಚಾಯ್ತಿಗಳು ಪಂಚಾಯ್ತಿಗಳಾಗೇ ಉಳಿಯಬೇಕು ಎಂದು ರೈತನಾಯಕಿ ಸುನಂದಾ ಜಯರಾಂ ಹೇಳಿದರು.
ನಗರಸಭೆ ವ್ಯಾಪ್ತಿಗೆ ಸೇರುವುದರಿಂದ ಅನ್ನ ತಿನ್ನುವ ಭೂಮಿ ನಾಶವಾಗುತ್ತದೆ. ಪಂಚಾಯ್ತಿಗಳು ನಗರಸಭೆಗೆ ಸೇರ್ಪಡೆಯಾಗುವ ಅವಶ್ಯಕತೆ ಇಲ್ಲ. ಶಾಸಕರ ನಿರ್ಧಾರದಲ್ಲಿ ಲೋಪವಾಗಿದೆ. ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ನಿಂತಿದೆ. ಸಮಯ ವ್ಯರ್ಥವಾಗಿದೆ. ಪಂಚಾಯ್ತಿಗಳ ಅಜೆಂಡಾದಲ್ಲಿ ಇಡದೇ ನಗರಸಭೆಗೆ ಸೇರಿಸುವ ಈ ನಿರ್ಧಾರ ಸರಿಯಲ್ಲ. ದಾಖಲೆ ಸಮೇತ ಸಚಿವರ ಬಳಿ ಕೊಟ್ಟಿದ್ದೇವೆ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ವಿವರಿಸಿದರು.ಗ್ರಾಮ ಪಂಚಾಯ್ತಿ ಚುನಾವಣೆ ಹತ್ತಿರ ಬರುತ್ತಿದೆ. ಸರ್ಕಾರ ಕೂಡಲೇ ಪಂಚಾಯ್ತಿಗಳನ್ನು ನಗರಸಭೆಗೆ ಸೇರಿಸುವ ನಿರ್ಧಾರವನ್ನು ಹಿಂಪಡೆಯುವ ಕೆಲಸ ಮಾಡಬೇಕು. ಸಚಿವರು ಸಿಎಂ ಜೊತೆ ಚರ್ಚಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರ ಭರವಸೆಗೆ ಒಪ್ಪಿದ್ದೇವೆ. ಶಾಂತಿಯುತವಾಗಿ ನಮ್ಮ ಧರಣಿ ಮುಂದುವರೆಯಲಿದೆ. ಸಚಿವರು, ಶಾಸಕರು, ಅಧಿಕಾರಿಗಳು ಯಾರೂ ಹೋರಾಟದ ಸ್ಥಳಕ್ಕೆ ಬರದಿರುವುದನ್ನು ಖಂಡಿಸುತ್ತೇವೆ ಎಂದರು.
ಮುಖಂಡರಾದ ಜಿ.ಟಿ.ಚಂದ್ರಶೇಖರ್, ವೀರಪ್ಪ, ಜಿ.ಎ.ಶಂಕರ್, ಲಿಂಗಪ್ಪಾಜಿ, ಜಿ.ಕೆ.ಗುರುಮೂರ್ತಿ, ಜಿ.ಪಿ.ರಾಮಲಿಂಗಯ್ಯ, ಗೊರವನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಉಮೇಶ್, ಜಿ.ಪಿ.ಪ್ರಸನ್ನ ಇತರರಿದ್ದರು.ಸಚಿವರಿಂದ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಫೆ.21ರಂದು ನಡೆಯುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಅಂಗವಾಗಿ ಪೋಸ್ಟರ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಯೋಗ ಮೇಳದ ಪೋಸ್ಟರನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಭಾಗವಹಿಸಲಿದ್ದು, ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರು ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಮೇಳದ ಸೌಲಭ್ಯ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ, ಮದ್ದೂರು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.