ಲಕ್ಷ್ಮೇಶ್ವರದಲ್ಲಿ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

| Published : Oct 28 2025, 12:43 AM IST / Updated: Oct 28 2025, 12:44 AM IST

ಲಕ್ಷ್ಮೇಶ್ವರದಲ್ಲಿ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಉಮಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ. ತಾಲೂಕಿನಾದ್ಯಂತ ಭುವನೇಶ್ವರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಕಾರ್ಯ ಮಾಡಬೇಕು ಎಂದು ತಾಪಂ ಇಒ ಕೃಷ್ಣಪ್ಪ ಧರ್ಮರ ತಿಳಿಸಿದರು.

ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕರ್ನಾಟಕ ರಾಜ್ಯೋತ್ಸವದಂದು ಪಟ್ಟಣದ ಐತಿಹಾಸಿಕ ಸ್ಥಳಗಳನ್ನು ಕನ್ನಡ ಧ್ವಜ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸುವುದು. ತಳಿರು- ತೋರಣ ಕಟ್ಟಿ ಶೃಂಗಾರಗೊಳಿಸುವುದು. ಪಟ್ಟಣದ ಉಮಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ.

ಕಾರ್ಯಕ್ರಮದಲ್ಲಿ ಶಾಸಕರು‌, ಮಾಜಿ ಶಾಸಕರು, ಪುರಸಭೆ ಅಧ್ಯಕ್ಷೆ ಹಾಗೂ ಸದಸ್ಯರು ಹಾಗೂ ಗಣ್ಯರನ್ನು ಆಗಮಿಸುವಂತೆ ಮನವಿ ಮಾಡುವುದು. ಶಾಲಾ ಮಕ್ಕಳು ಕಾರ್ಯಕ್ರಮದಡಿಯಲ್ಲಿ ಭಾಗಹಿಸುವಂತೆ ನೋಡಿಕೊಳ್ಳುವುದು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಕನ್ನಡ ನಾಡಿನ ಅಭಿಮಾನ ಸಾರುವ ಗೀತೆಗಳನ್ನು ಹಾಡುವುದು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡುವ ಮೂಲಕ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುವುದು. ಎಲ್ಲ ಇಲಾಖೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಹಾಜರು ಇರಬೇಕು ಎಂದರು.ನ. 1ರಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ನಾಡು ನುಡಿ ನೆಲ ಜಲ ಸಂಸ್ಕೃತಿಯ ಬಿಂಬಿಸುವಂತೆ ಇರಬೇಕು ಎಂದರು.

ಕಂದಾಯ ಇಲಾಖೆಯ ಅಬ್ದುಲ್ ಮನಿಯಾರ್ ಕಾರ್ಯಕ್ರಮ ನಿರ್ವಹಿಸಿದರು. ಗ್ರೇಡ್- 2 ತಹಸೀಲ್ದಾರ್ ಮಂಜುನಾಥ ಅಮಾಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಂಜುಳಾ ಹೂಗಾರ, ಈಶ್ವರ ಮೆಡ್ಲೇರಿ, ಚಂದ್ರಶೇಖರ ನರಸಮ್ಮನವರ, ಶಂಭುಲಿಂಗಪ್ಪ ನೆಗಳೂರ, ಸತೀಶ್ ಬೊಮಲೆ, ರಾಣಿ ಪಾಟೀಲ, ರೇಣುಕಾ ಶಿರಹಟ್ಟಿ, ಮಂಜುನಾಥ ರಾಥೋಡ್, ಎಂ.ಎ. ನದಾಫ್, ಕರವೇ ಘಟಕದ ಅಧ್ಯಕ್ಷ ಲೋಕೇಶ ಸುತಾರ, ಪ್ರವೀಣ ಗಾಣಿಗೇರ, ಮಂಜುನಾಥ ಗಾಂಜಿ ಸೇರಿದಂತೆ ಅನೇಕರು ಇದ್ದರು.