ತೊರೆಮಾವಿನಹಳ್ಳಿ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕ ಪಂಚಾಕ್ಷರಿ ಆರೋಪ ಮಾಡಿರುವುದನ್ನು ತಳ್ಳಿಹಾಕಿರುವ ಜಿಲ್ಲಾ ಬ್ಯಾಂಕ್ ನ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಸಹಕಾರ ಸಂಘಗಳಲ್ಲಿ ಪ್ರತಿ ವರ್ಷ ರೈತರು ತಾವು ಪಡೆದಿದ್ದ ಸಾಲವನ್ನು ಮರುಪಾವತಿಸುವ ವೇಳೆ ಸಹಕಾರ ಸಂಘಗಳ ಸಿಬ್ಬಂದಿ ಅಕ್ರಮವಾಗಿ ಪಡೆಯುವ ಹಣವನ್ನು ತಾವು ಪಡೆಯುತ್ತಿದ್ದೇನೆಂದು ತೊರೆಮಾವಿನಹಳ್ಳಿ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕ ಪಂಚಾಕ್ಷರಿ ಆರೋಪ ಮಾಡಿರುವುದನ್ನು ತಳ್ಳಿಹಾಕಿರುವ ಜಿಲ್ಲಾ ಬ್ಯಾಂಕ್ ನ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನ ಸೊಸೈಟಿಗಳಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ತೊರೆಮಾವಿನಹಳ್ಳಿ ಸೊಸೈಟಿಯಲ್ಲಿ ರೈತರ ಸಾಲ ನವೀಕರಣ ಮಾಡಲು ರೈತರಿಂದ ಹಣ ಪಡೆಯಲಾಗುತ್ತಿದೆ. ಸೊಸೈಟಿಗಳಲ್ಲಿ ಠೇವಣಿ ಇಟ್ಟಿರುವ ಹಣವನ್ನು ವಾಯ್ದೆ ಮುಗಿದರೂ ಹಿಂತಿರುಗಿಸುತ್ತಿಲ್ಲ ಎಂದು ಪಂಚಾಕ್ಷರಿ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ. ಪಂಚಾಕ್ಷರಿಯವರೇ ಈ ಹಿಂದೆ 3 ವರ್ಷಗಳ ಕಾಲ ತೊರೆಮಾವಿನಹಳ್ಳಿ ಸೊಸೈಟಿ ಅಧ್ಯಕ್ಷರಾಗಿದ್ದರು. ಆಗಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದಾಗಿತ್ತು. ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಿಗೆ ಸಂಫೂರ್ಣ ಅಧಿಕಾರ ಇರುತ್ತೆ. ಅವರೇ ಕೊಟ್ಟಿರುವ ಸಾಲವನ್ನು ಕಟ್ಟಿಸಲು ಸಾಧ್ಯವಾಗಿಲ್ಲ. ವೈಯಕ್ತಿಕ ದ್ವೇಷದಿಂದ ನನ್ನ ಮೇಲೆ ಆರೋಪ ಮಾಡಲಾಗಿದೆ. ಈಗ ಯಾವುದೇ ಆಧಾರವಿಲ್ಲದೇ ಆರೋಪ ಮಾಡುತ್ತಿರುವುದು ಸರಿಯಲ್ಲ. ನಾನು ಸಿಬ್ಬಂದಿಯಿಂದ ಹಣ ಪಡೆದಿರುವುದನ್ನು ದಾಖಲೆ ಸಹಿತ ಸಾಬೀತುಪಡಿಸಬೇಕು. ತಪ್ಪಿದಲ್ಲಿ ಪಂಚಾಕ್ಷರಿ ಮೇಲೆ ಕಾನೂನು ಹೋರಾಟ ಮಾಡಲಾಗುವುದು ಎಂದರು.
ನನಗೆ ಯಾವುದೇ ರೈತರಿಂದ ಹಣ ಪಡೆದು ರಾಜಕೀಯ ಮಾಡುವ ದುಸ್ಥಿತಿ ಬಂದಿಲ್ಲ. ನಾನು ಸೊಸೈಟಿಗಳಿಂದ ರೈತರಿಂದ ಹಣ ಪಡೆಯುತ್ತಿದ್ದೇನೆ ಎಂದು ಸಾಬೀತು ಮಾಡಿದರೆ ಈ ಕ್ಷಣದಲ್ಲಿಯೇ ಅಧಿಕಾರ ತ್ಯಜಿಸುತ್ತೇನೆ. ನಾನು ಬೇರೆಯವರ ರೀತಿ ವಾಚು, ಉಂಗುರ, ಕೈಚೈನ್ ಪಡೆಯುವ ನಿರ್ದೇಶಕನಲ್ಲ. ನಮ್ಮ ವಿರುದ್ಧ ಮಾಡಿರುವ ಆರೋಪದ ಹಿಂದೆ ಯಾರು ಇದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ತಾಲೂಕಿನಲ್ಲಿ ಉತ್ತಮವಾಗಿ ಸೊಸೈಟಿಗಳು ನಡೆಯುತ್ತಿವೆ. ಇದನ್ನು ಸಹಿಸದ ಕೆಲವು ಮಂದಿ ಸೊಸೈಟಿ ಹಾಳು ಮಾಡಲು ಕೆಲವರನ್ನು ಎತ್ತಿ ಕಟ್ಟಿದ್ದಾರೆ. ಅಮಾಯಕರನ್ನು ಬಲಿ ಮಾಡುವ ಬದಲು ಅವರೇ ಸುದ್ದಿಗೋಷ್ಠಿ ಮಾಡಿ, ಅಕ್ರಮ ಅವ್ಯವಹಾರಗಳನ್ನು ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದರು. ಸುದ್ದಿಗೋಷ್ಟಿಯಲ್ಲಿ ಟಿಎಪಿಎಂಎಸ್ ಅಧ್ಯಕ್ಷ ರಮೇಶ್ ಗೌಡ, ಯೂನಿಯನ್ ಬ್ಯಾಂಕ್ ನಿರ್ದೇಶಕ ವಿಜಯಕುಮಾರ್, ತೊರೆಮಾವಿನಹಳ್ಳಿ ಸೊಸೈಟಿ ಅಧ್ಯಕ್ಷ ಓಂಕಾರ ಮೂರ್ತಿ, ಕಲ್ಕರೆ ಸೊಸೈಟಿ ಅಧ್ಯಕ್ಷ ಡಿ.ಪಿ.ರಾಜು, ಕೋಳಘಟ್ಟ ಅಧ್ಯಕ್ಷ ವೀರೇಂದ್ರ ಪಾಟೀಲ್, ಮುಖಂಡರಾದ ಯದುಕುಮಾರ್, ಪ್ರಸನ್ನಕುಮಾರ್, ನಂಜುಂಡಪ್ಪ, ದೊರೆರಾಜು, ಉದಯಕುಮಾರ್, ರಾಜಣ್ಣ, ನಿಜಗುಣ, ಶಶಿಕುಮಾರ್, ಯಜಮಾನ್ ಮಹೇಶ್, ಬೋರೇಗೌಡ, ಶಿವಕುಮಾರ್ ಸೇರಿದಂತೆ ಇತರರು ಇದ್ದರು.