ನೀರಿನ ಕಂದಾಯ ಕಟ್ಟದಿದ್ದರೆ ನಲ್ಲಿ ಸಂಪರ್ಕ ರದ್ದುಪಡಿಸುವುದಾಗಿ ನೋಟಿಸ್ ನೀಡಿದ್ದನ್ನು ಖಂಡಿಸಿ, ಎಸ್‌ಒಜಿ ಕಾಲನಿ ಬಿ ಮತ್ತು ಸಿ ಬ್ಲಾಕ್‌ಗಳಲ್ಲಿ ರಾಜಕಾಲುವೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ನಗರದ ಪಾಲಿಕೆ ವ್ಯಾಪ್ತಿಯ 31ನೇ ವಾರ್ಡ್‌ನ ಎಸ್ಒಜಿ ಕಾಲನಿಯ ಬಿ ಬ್ಲಾಕ್‌ ನಾಗರೀಕ ಹಿತರಕ್ಷಣಾ ಸಮಿತಿಯಿಂದ ನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

- ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆಯಲ್ಲಿ ಬಿ.ಕಲ್ಲೇಶಪ್ಪ ಒತ್ತಾಯ । ಎಸ್‌ಒಜಿ ಕಾಲನಿ ಬಿ, ಸಿ ಬ್ಲಾಕ್‌ಗೆ ರಾಜಕಾಲುವೆ ನಿರ್ಮಿಸಲು ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನೀರಿನ ಕಂದಾಯ ಕಟ್ಟದಿದ್ದರೆ ನಲ್ಲಿ ಸಂಪರ್ಕ ರದ್ದುಪಡಿಸುವುದಾಗಿ ನೋಟಿಸ್ ನೀಡಿದ್ದನ್ನು ಖಂಡಿಸಿ, ಎಸ್‌ಒಜಿ ಕಾಲನಿ ಬಿ ಮತ್ತು ಸಿ ಬ್ಲಾಕ್‌ಗಳಲ್ಲಿ ರಾಜಕಾಲುವೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ನಗರದ ಪಾಲಿಕೆ ವ್ಯಾಪ್ತಿಯ 31ನೇ ವಾರ್ಡ್‌ನ ಎಸ್ಒಜಿ ಕಾಲನಿಯ ಬಿ ಬ್ಲಾಕ್‌ ನಾಗರೀಕ ಹಿತರಕ್ಷಣಾ ಸಮಿತಿಯಿಂದ ನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ನಗರದ ಪಾಲಿಕೆ ಕಚೇರಿಗೆ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ, ಡಿಎಸ್‌ಎಸ್‌ ಮುಖಂಡ ಹೆಗ್ಗೆರೆ ರಂಗಪ್ಪ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಸ್ಥಳೀಯ ನಿವಾಸಿಗಳು, ಮಹಿಳೆಯರು, ಯುವಜನರು, ನೀರಿನ ಕಂದಾಯ ಕಟ್ಟದಿದ್ದರೆ ನಲ್ಲಿ ಸಂಪರ್ಕ ತಪ್ಪಿಸುವ ನೋಟಿಸ್ ಹಿಂಪಡೆಯಬೇಕು, ಕಾಲನಿ ಬಿ ಮತ್ತು ಸಿ ಬ್ಲಾಕ್‌ನಲ್ಲಿ ರಾಜಕಾಲುವೆ ನಿರ್ಮಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಮುಖಂಡ ಬಿ.ಕಲ್ಲೇಶಪ್ಪ ಮಾತನಾಡಿ, 2001-02ರಲ್ಲಿ ಜಿಲ್ಲಾಧಿಕಾರಿ ಆಗಿದ್ದ ಕೆ.ಶಿವರಾಂ ಆಲೋಚನೆಯಂತೆ ಎಸ್‌ಒಜಿ ಕಾಲನಿಯಲ್ಲಿ ಆಟೋ ಚಾಲಕರು, ಕ್ಷೌರಿಕರು, ನಾಟಕ- ರಂಗಭೂಮಿ ಕಲಾವಿದರು, ವಿಆರ್‌ಎಸ್ ಹಮಾಲರು, ಚಿತ್ರ ಮಂದಿರ ಕಾರ್ಮಿಕರು ಸೇರಿದಂತೆ ವಿವಿಧ, ವಿಶೇಷ ವೃತ್ತಿ ಬಾಂಧವರಿಗೆ 1500 ಆಶ್ರಯ ಮನೆಗಳನ್ನು ನಿರ್ಮಿಸಿ, ಹಂಚಿಕೆ ಮಾಡಿದ್ದರು. ಈವರೆಗೂ ಸಮಿತಿ ನೇತೃತ್ವದಲ್ಲಿ ಹೋರಾಟ ಮಾಡಿಕೊಂಡೇ, ಕಾಲನಿಗೆ ಮೂಲ ಸೌಕರ್ಯಗಳನ್ನು ಒಂದೊಂದಾಗಿ ಪಡೆಯುತ್ತಾ ಬಂದಿದ್ದೇವೆ ಎಂದರು.

ಪಾಲಿಕೆಯಿಂದ 2015-16ರಲ್ಲಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿದ್ದರು. ವಾರಕ್ಕೆ 2 ದಿನ ಮಾತ್ರವೇ ಸುಮಾರು 20 ನಿಮಿಷ ಮಾತ್ರ ಆ ಭಾಗಕ್ಕೆ ನೀರು ಬಿಡುತ್ತಾರೆ. ಈ ಹಿಂದೆ ಮೂರು ವರ್ಷ ಮಳೆಯೇ ಬಾರದೇ, ಬರಗಾಲ ಆವರಿಸಿದ್ದಾಗ ನಮಗೆ ನೀರನ್ನು ಪೂರೈಸಿಲ್ಲ. ಪಾಲಿಕೆಯಿಂದ ಮನೆ ಮನೆಗಳಿಗೆ ನೋಟಿಸ್ ನೀಡಿ, ₹38 ಸಾವಿರದಿಂದ ₹40 ಸಾವಿರವರೆಗೆ ನೀರಿನ ಕಂದಾಯ ಬಾಕಿ ಇದೆಯೆಂದು, ಹಣ ಕಟ್ಟದಿದ್ದರೆ ನಲ್ಲಿ ಸಂಪರ್ಕ ತಪ್ಪಿಸುವುದಾಗಿ ನೋಟಿಸ್‌ನಲ್ಲಿ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವುದು ಸರಿಯಲ್ಲ ಎಂದು ಕಲ್ಲೇಶಪ್ಪ ಆಕ್ಷೇಪಿಸಿದರು.

ನೀರಿನ ಬಾಕಿಗೆ ನೋಟಿಸ್‌ ಎಷ್ಟು ಸರಿ?:

ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ನೀರಿನ ಕಂದಾಯ ಕಟ್ಟದಿದ್ದರೆ ನಿಮ್ಮ ಮನೆಗಳ ಇ-ಸ್ವತ್ತು ಮಾಡಿಕೊಡುವುದಿಲ್ಲ ಎಂಬ ಬೆದರಿಕೆಯೂ ಹಾಕಲಾಗುತ್ತಿದೆ. ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಈ ಹಿಂದೆ ನೀವೆಲ್ಲಾ ಬಡವರಿದ್ದೀರಿ. ನೀರಿನ ಕಂದಾಯ ಕಟ್ಟಬೇಡಿ. ಸಂಬಂಧಿಸಿದವರೊಂದಿಗೆ ನಾನು ಮಾತನಾಡುತ್ತೇನೆ. ಅಲ್ಪಾವಧಿಯ ನೀರಿನ ಕಂದಾಯ ಕಟ್ಟುವುದಕ್ಕೆ ಅನುಕೂಲ ಮಾಡಿಕೊಡುತ್ತೇನೆಂಬ ಭರವಸೆ ನೀಡಿದ್ದರು. ಆಗ ಸಚಿವ, ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಸೂಚನೆಯಂತೆ ಸುಮ್ಮನಿದ್ದ ಪಾಲಿಕೆ ಅಧಿಕಾರಿಗಳು ಈಗ ಇದ್ದಕ್ಕಿದ್ದಂತೆ ₹38-₹40 ಸಾವಿರ ನೀರಿನ ಕಂದಾಯ ಬಾಕಿ ಕಟ್ಟಿ ಎಂಬ ನೋಟಿಸ್ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸೌಲಭ್ಯಗಳ ಒದಗಿಸಿ:

ಎಸ್‌ಒಜಿ ಕಾಲನಿಯ ಬಿ ಮತ್ತು ಸಿ ಬ್ಲಾಕ್‌ಗಳಲ್ಲಿ ಮಳೆಗಾಲದಲ್ಲಿ ರಾಜಕಾಲುವೆ ಇಲ್ಲದ ಕಾರಣಕ್ಕೆ ಚರಂಡಿ ನೀರು ಮನೆಗಳಿಗೆ ನುಗ್ಗಿ, ಎಲ್ಲಿಲ್ಲದ ಸಮಸ್ಯೆಯಾಗುತ್ತಿದೆ. ಕಾಲನಿ ನಿವಾಸಿಗಳಾದ ಒಂದು ಸಾವಿರ ಮಂದಿ ಜಯದೇವ ವೃತ್ತದಿಂದ ಗಾಂಧಿ ವೃತ್ತ, ಪಾಲಿಕೆ, ಎಸಿ ಕಚೇರಿವರೆಗೆ ಹೋರಾಟ ಮಾಡಿ, ಮನವಿ ಅರ್ಪಿಸಿದ್ದರೂ ಪಾಲಿಕೆ ಆಡಳಿತ ಯಂತ್ರ ಸ್ಪಂದಿಸಿಲ್ಲ. ರಾಜ ಕಾಲುವೆಯನ್ನು ಎಸ್‌ಒಜಿ ಕಾಲನಿಯ ಬಿ ಮತ್ತು ಸಿ ಬ್ಲಾಕ್‌ಗಳಲ್ಲಿ ಮಾಡಿಕೊಡಬೇಕು. ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಿವೇಶನರಹಿತರ ಅರ್ಜಿ ಪರಿಶೀಲಿಸಿ, ನಿವೇಶನ ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಮಂಜುನಾಥ, ಇ.ಪ್ರದೀಪ, ಎನ್.ಮಹಾಂತೇಶ, ಜಿ.ಟಿ.ಪ್ರಕಾಶ, ಎಲ್.ಜಯಪ್ಪ, ಬಾಳಪ್ಪ, ಸತೀಶ, ಬಿ.ಧನುಷ್, ಆರ್.ಮಂಜುನಾಥ, ಬಾಬು, ಕೆ.ಜಿ.ಪ್ರಕಾಶ, ಗಣೇಶ, ಅಣ್ಣಪ್ಪ, ಸುರೇಶ, ಕೆ.ಎನ್.ಮಹಾಂತೇಶ, ಪ್ರಹ್ಲಾದ್, ಬಿ.ಗುರುಮೂರ್ತಿ, ಮಹಾಂತೇಶ ಇತರರು ಇದ್ದರು.

- - -

(ಕೋಟ್‌) ಕಾಲನಿಯಲ್ಲಿ 15 ರಸ್ತೆಗಳನ್ನು ಸಿಸಿ ರಸ್ತೆಗಳಾಗಿ ನಿರ್ಮಿಸಬೇಕು. ಪಾರ್ಕ್ ಅಭಿವೃದ್ಧಿಪಡಿಸಬೇಕು. ವಾಯು ವಿಹಾರಿಗಳಿಗೆ ವ್ಯಾಯಾಮದ ಸಾಮಗ್ರಿಗಳನ್ನು ಪಾರ್ಕ್‌ನಲ್ಲಿ ಅಳವಡಿಸಬೇಕು. ನೀರಿನ ಕಂದಾಯ ಕಡಿಮೆ ಮಾಡಿ, ಅಲ್ಪಾವಧಿ ಕಂದಾಯ ಮಾತ್ರ ಕಟ್ಟಿಸಿಕೊಳ್ಳಬೇಕು. ಎಲ್ಲ ಆಶ್ರಯ ಮನೆಗಳ ಇ-ಸ್ವತ್ತು ಮಾಡಿಕೊಡಬೇಕು. ಪಾಲಿಕೆಗೆ ಸಲ್ಲಿಸಿರುವ ಮನವಿ ಪತ್ರವನ್ನು ಸರ್ಕಾರದ ಗಮನಕ್ಕೂ ತರಬೇಕು.

- ಬಿ.ಕಲ್ಲೇಶಪ್ಪ, ಮುಖಂಡ.

- - -

-29ಕೆಡಿವಿಜಿ1.ಜೆಪಿಜಿ:

ನೀರಿನ ಕಂದಾಯ ಪಾವತಿಸಲು ನೋಟಿಸ್‌ ಜಾರಿಗೊಳಿಸಿದ ಕ್ರಮ ಖಂಡಿಸಿ ದಾವಣಗೆರೆ ಎಸ್‌ಒಜಿ ಕಾಲನಿ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. -29ಕೆಡಿವಿಜಿ2.ಜೆಪಿಜಿ:

ದಾವಣಗೆರೆ ಎಸ್‌ಒಜಿ ಕಾಲನಿ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.