ಸಾರಾಂಶ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಮಂಜೂರಾಗಿದ್ದ ₹೮೩೮ ಕೋಟಿ ವೆಚ್ಚದ ೨೭೬ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಬರಗಾಲದಲ್ಲಿ ಆಸರೆಯಾಗಬೇಕಿದ್ದ ಯೋಜನೆ ಇನ್ನೂ ಮುಗಿದಿಲ್ಲ, ಇದರಿಂದ ಸಮಸ್ಯೆ ಮುಂದುವರಿದಂತಾಗಿದೆ.
ಕನ್ನಡಪ್ರಭ ವಾರ್ತೆ ಹಾವೇರಿ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಮಂಜೂರಾಗಿದ್ದ ₹೮೩೮ ಕೋಟಿ ವೆಚ್ಚದ ೨೭೬ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಬರಗಾಲದಲ್ಲಿ ಆಸರೆಯಾಗಬೇಕಿದ್ದ ಯೋಜನೆ ಇನ್ನೂ ಮುಗಿದಿಲ್ಲ, ಇದರಿಂದ ಸಮಸ್ಯೆ ಮುಂದುವರಿದಂತಾಗಿದೆ.ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅನೇಕ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಅನುದಾನವನ್ನೂ ಮೀಸಲಿಡಲಾಗಿತ್ತು. ಆದರೆ, ಎರಡು ವರ್ಷಗಳ ಕಾಲ ಕಾಡಿದ ಕೊರೋನಾ ಕಾರಣದಿಂದ ಆಗಲೇ ಮುಗಿಯಬೇಕಿದ್ದ ಕಾಮಗಾರಿಗಳು ಈಗಲೂ ಮಂದಗತಿಯಲ್ಲಿ ಸಾಗುತ್ತಿವೆ.
ಸರ್ವಜ್ಞ ಹಾಗೂ ಇತರೆ ೮೮ ಕೆರೆ ತುಂಬಿಸುವ ಯೋಜನೆ:ಹಿರೇಕೆರೂರ ತಾಲೂಕಿನ ೮೮ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ₹೧೮೫ ಕೋಟಿ ವೆಚ್ಚದಲ್ಲಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆಗೆ ೨೦೨೦ರ ನವೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಹರಿಹರ ತಾಲೂಕಿನ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿಗೆ ಜ್ಯಾಕ್‌ವೆಲ್ ನಿರ್ಮಿಸಿ ಅಲ್ಲಿಂದ ನೀರು ತಂದು ಕೆರೆ ತುಂಬಿಸುವ ಯೋಜನೆ ಇದಾಗಿದ್ದು, ೧೮ ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಈವರೆಗೆ ಕೇವಲ ಶೇ. ೪೦ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಶೇ. ೬೦ರಷ್ಟು ಕಾಮಗಾರಿ ನಡೆಯಬೇಕಿದೆ.ಬಾಳಂಬೀಡು ಮತ್ತು ಇತರೆ ೧೬೨ ಕೆರೆ ತುಂಬಿಸುವ ಯೋಜನೆ:ಹಾನಗಲ್ಲ ತಾಲೂಕಿನ ಬಾಳಂಬೀಡು ಗ್ರಾಮದ ಕೆರೆ ಸೇರಿ ತಾಲೂಕಿನ ೧೬೨ ಕೆರೆ ತುಂಬಿಸುವ ನಿಟ್ಟಿನಲ್ಲಿ ₹ ೪೧೮ ಕೋಟಿ ವೆಚ್ಚದಲ್ಲಿ ವರದಾ ನದಿಗೆ ಜ್ಯಾಕವೇಲ್ ನಿರ್ಮಿಸಿ ಅಲ್ಲಿಂದ ಕೆರೆ ತುಂಬಿಸುವ ಯೋಜನೆಗೆ ೨೦೧೯ರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಮಳೆಗಾಲ ಸೇರಿ ೨೪ ತಿಂಗಳಲ್ಲಿ ಈ ಕಾಮಗಾರಿ ಮುಗಿಯಬೇಕಿತ್ತು. ಅಂದರೆ ೨೦೨೧ರ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೀಗ ಯೋಜನೆ ಮುಗಿಯುವ ಹಂತಕ್ಕೆ ಬಂದಿದ್ದು, ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ.ಮೆಡ್ಲೇರಿ ಮತ್ತು ಇತರೆ ೧೯ ಕೆರೆ ತುಂಬಿಸುವ ಯೋಜನೆ:ರಾಣಿಬೆನ್ನೂರ ತಾಲೂಕಿನ ಮೆಡ್ಲೇರಿ ಮತ್ತು ಇತರೆ ೧೯ ಕೆರೆ ತುಂಬಿಸುವ ನಿಟ್ಟಿನಲ್ಲಿ ₹೨೧೪ಕೋಟಿ ವೆಚ್ಚದಲ್ಲಿ ೨೦೨೨ರ ಸೆಪ್ಟಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಈ ಕಾಮಗಾರಿ ೧೮ ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಈವರೆಗೆ ಕೇವಲ ಶೇ. ೪೦ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ.ಬುಳ್ಳಾಪುರ-ಹಾಡೆ ಕೆರೆ ತುಂಬಿಸುವ ಯೋಜನೆ:ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರ-ಹಾಡೆ ಇತರೆ ೭ಕೆರೆ ತುಂಬಿಸುವ ನಿಟ್ಟಿನಲ್ಲಿ ₹೨೧.೧೧ಕೋಟಿ ವೆಚ್ಚದಲ್ಲಿ ೨೦೨೩ರ ಮಾರ್ಚ್‌ನಲ್ಲಿ ಚಾಲನೆ ನೀಡಲಾಗಿದೆ. ಮಳೆಗಾಲ ಸೇರಿ ೧೫ ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಈವರೆಗೆ ಕೇವಲ ಶೇ. ೧೦ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಈ ನಾಲ್ಕೂ ಕೆರೆ ತುಂಬಿಸುವ ಯೋಜನೆಗಳು ಪೂರ್ಣಗೊಂಡರೆ ೨೭೬ಕ್ಕೂ ಹೆಚ್ಚು ಕೆರೆಗಳು ತುಂಬಿ ಜಿಲ್ಲೆಯ ನೀರಿನ ಸಮಸ್ಯೆ ನೀಗಲಿದೆ. ಹೀಗಾಗಿ ವಿವಿಧ ಕಾರಣದಿಂದಾಗಿ ಆಮೆಗತಿಯಲ್ಲಿ ಸಾಗುತ್ತಿರುವ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸುವ ಕಾರ್ಯ ಆಗಬೇಕಿದೆ.ಸರ್ವಜ್ಞ ಏತ ನೀರಾವರಿ ಯೋಜನೆಯ ಕಾಮಗಾರಿ ಕೇವಲ ಶೇ.೪೦ರಷ್ಟು ಪೂರ್ಣಗೊಂಡಿದೆ. ಬರುವ ಫೆಬ್ರುವರಿಯಲ್ಲಿ ಪೂರ್ಣಗೊಳಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ಲಿಖಿತ ಪತ್ರ ನೀಡುವಂತೆ ಎಂಜಿನಿಯರ್‌ಗೆ ಸೂಚಿಸಲಾಗಿದೆ. ಮೆಡ್ಲೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಶೇ. ೫೦ರಷ್ಟು ಪೂರ್ಣಗೊಂಡಿದೆ. ಬುಳ್ಳಾಪುರ ಹಾಡೆ ಇತರ ಏಳು ಕೆರೆಗಳನ್ನು ತುಂಬಿಸುವ ಕಾಮಗಾರಿ ಶೇ. ೪೦ರಷ್ಟು ಮಾತ್ರ ಪೂರ್ಣಗೊಂಡಿದೆ. ಕಾಮಗಾರಿ ವಿಳಂಬವಾಗಿರುವುದರಿಂದ ನಿಗದಿತ ಕಾಲಾವಧಿಗೆ ಮುನ್ನವೇ ಈ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲು ಸಂಬಂಧಿಸಿದ ಅಭಿಯಂತರರಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಪಂ ಸಿಇಒ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.