ಸಾರಾಂಶ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಕೊನೆಯ ದಿನ ನೀರಿನಲ್ಲಿ ದೇವರ ಬಂಡಿ ರಥೋತ್ಸವ, ದೈವಗಳಿಂದ ಮೀನಿಗೆ ಆಹಾರ ಹಾಗೂ ದೇವಳದ ಆನೆ ನೀರಿನಾಟ ನಡೆಯಿತು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಭಾನುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಟ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣದ ಸುತ್ತಲೂ ನೀರನ್ನು ಮಧ್ಯಾಹ್ನದ ನಂತರ ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಆರಂಭವಾಯಿತು. ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ನಂತರ ವಿವಿಧ ಸಂಗೀತ ಸುತ್ತುಗಳ ಪಾಲಕಿ ಉತ್ಸವ ನೀರಿನಲ್ಲಿ ನಡೆಯಿತು. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಯಿತು.ಶ್ರೀ ದೇವಳದ ಆನೆ ಯಶಸ್ವಿ ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮವನ್ನು ಪಟ್ಟಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ಮಕ್ಕಳೊಂದಿಗೆ ನೀರಾಟವಾಡಿ ಸಂಭ್ರಮಿಸಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿಜಿಎಸ್‌ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ವನಜಾ.ವಿ.ಭಟ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್. ಮತ್ತಿತರರಿದ್ದರು.ಜಾತ್ರೆ ಬಳಿಕ ದೇವಳದ ಪ್ರಧಾನ ಸೇವೆಯಾದ ಸರ್ಪಸಂಸ್ಕಾರವು ಸೇವೆಯು ಪುನರಾರಂಭಗೊಂಡಿದೆ.
ಗೋಪುರ ನಡಾವಳಿ: ಜಾತ್ರಾ ಮಹೋತ್ಸವದ ನಂತರ ರಕ್ಷಣಾ ದೈವಗಳಿಗೆ ಕೊಡುವ ಕಟ್ಟು ಕಟ್ಟಳೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿಯು ಶ್ರೀ ದೇವಳದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ತನಕ ಜರುಗಿತು.ಸೋಮವಾರ ಬೆಳಗ್ಗೆ ಕ್ಷೇತ್ರ ದೈವ ಪುರುಷರಾಯವು ಕುಮಾರಧಾರ ನದಿಗೆ ತೆರಳಿ ಮತ್ಸ್ಯ ತೀರ್ಥದಲ್ಲಿ ಪವಿತ್ರ ಮೀನುಗಳಿಗೆ ಅಕ್ಕಿ ಹಾಕುವುದರ ಮೂಲಕ ಆಹಾರವನ್ನು ನೀಡಿ ಹರಸಿತು.ಭಾನುವಾರ ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯಲಾಯಿತು. ಬಳಿಕ ಪುರೋಹಿತ ನಾರಾಯಣ ಭಟ್ ನೂಚಿಲ ಪ್ರಸಾದ ನೀಡಿದರು. ನಂತರ ದೈವಗಳಿಗೆ ಗಗ್ಗರ ಸೇವೆ ಆರಂಭವಾಯಿತು.* ಜ.೧೬ರಂದು ಕಿರುಷಷ್ಠಿ:ಶ್ರೀ ದೇವಳದಲ್ಲಿ ಚಂಪಾಷಷ್ಠಿಯ ನಂತರ ಶ್ರೀ ದೇವರ ಕಿರುಷಷ್ಠಿ ರಥೋತ್ಸವವು ಜ.೧೬ರಂದು ಸಂಜೆ ನೆರವೇರಲಿದೆ. ಈ ಮೊದಲು ಕಿರುಷಷ್ಠಿ ಅಂಗವಾಗಿ ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.