ಸಾರಾಂಶ
ಗ್ರಾಮ ಪಂಚಾಯಿತಿ ನಿರ್ವಹಿಸುವ ಗ್ರಾಮಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅವಕಾಶವಿದೆ.
ಬಳ್ಳಾರಿ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಗ್ರಾಮಸಭೆಗಳಲ್ಲಿ ಮಹಿಳಾ ಭಾಗವಹಿಸುವಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮದ್ಯನಿಷೇಧ ಆಂದೋಲನ- ಕರ್ನಾಟಕ ಸಂಘಟನೆಯ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಗ್ರಾಮ ಪಂಚಾಯಿತಿ ನಿರ್ವಹಿಸುವ ಗ್ರಾಮಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅವಕಾಶವಿದೆ. ಪಂಚಾಯತ್ ರಾಜ್ ಕಾನೂನಿನಡಿ ರಾಜ್ಯ ಸರ್ಕಾರದ ಯಾವುದೇ ಒಂದು ಮದ್ಯದ ಅಂಗಡಿ ಪರವಾನಗಿ ನೀಡಲು ಅಥವಾ ರದ್ದು ಮಾಡಲು ಮಹಿಳಾ ಗ್ರಾಮಸಭೆ ಠರಾವಿಗೆ ಮಾನ್ಯತೆ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಈ ಹಿಂದೆ ಇದ್ದ ಇದೇ ನಿಯಮವನ್ನು ತೆರವುಗೊಳಿಸಲಾಗಿದೆ. ಒಂದೆಡೆ ಪರವಾನಗಿ ಪಡೆದ ಮದ್ಯದ ಅಂಗಡಿಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರೆ, ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ನಿರಾತಂಕವಾಗಿ ನಡೆದಿದೆ. ಕಿರಾಣಿ ಅಂಗಡಿ, ಪಾನ್‌ಶಾಪ್, ಗೂಡಂಗಡಿಗಳಲ್ಲಿ ಸಹ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಮಕ್ಕಳು, ಯುವಕರು ಮದ್ಯಪಾನ ಮಾಡಲಾರಂಭಿಸಿದ್ದು, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದೇ ರೀತಿ ಅಕ್ರಮ ಮದ್ಯ ಮಾರಾಟ ಮುಂದುವರಿದರೆ ಕರ್ನಾಟಕದ ಯುವಪೀಳಿಗೆಯೇ ನಾಶವಾಗುವ ಸಾಧ್ಯತೆಯಿದೆ. ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಕಳೆದ ಹತ್ತು ವರ್ಷಗಳಿಂದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಹಾಗೂ ಗ್ರಾಮಸಭೆಗಳಲ್ಲಿ ಮಹಿಳಾ ಭಾಗವಹಿಸುವಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮದ್ಯನಿಷೇಧ ಆಂದೋಲನ-ಕರ್ನಾಟಕ ಸಂಘಟನೆಯಿಂದ ನವೆಂಬರ್ 25 ರಂದು ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ಕೂಡಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ನಿಷೇಧಕ್ಕೆ ಕ್ರಮ ವಹಿಸಬೇಕು ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕಿ ಅಕ್ಕಮಹಾದೇವಿ ಮರಬ್ಬಿಹಾಳು, ಅಮೃತಾ, ಮಮತಾ, ಅರುಣಾ, ಅಂಜಿನಪ್ಪ, ಶಾಮೇಲ್ ಚರಣ್ ಇದ್ದರು. ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರು ಮನವಿಪತ್ರ ಸ್ವೀಕರಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಬೇಕು ಹಾಗೂ ಗ್ರಾಮಸಭೆಗಳಲ್ಲಿ ಮಹಿಳಾ ಭಾಗವಹಿಸುವಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮದ್ಯನಿಷೇಧ ಆಂದೋಲನ-ಕರ್ನಾಟಕ ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))