ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಿಲ್ಲಾ ಭಾಗದ ನಡುಗಡ್ಡೆ ಪ್ರದೇಶ ಹಾಗೂ ಹಳೇ ಬಾಗಲಕೋಟೆ ನಗರ ಸಂಪೂರ್ಣ ಸ್ಥಳಾಂತರಕ್ಕೆ ಆಗ್ರಹಿಸಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯಿಂದ ನಗರದಲ್ಲಿ ಪಾದಯಾತ್ರೆ ನಡೆಸಿದರು.

ಮಂಗಳವಾರ ಬೆಳಗ್ಗೆ ಕಿಲ್ಲಾ ನಗರದ ಗ್ರಾಮ ದೇವತೆ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

ನಂತರ ಹಳೇ ನಗರದಿಂದ ವಿದ್ಯಾಗಿರಿಯ ಬಿಟಿಡಿಎ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿದ ಸಂತ್ರಸ್ತರು ಕಚೇರಿ ಎದುರು ಸಾಂಕೇತಿಕ ಧರಣಿ ಆರಂಭಿಸಿದರು. ರಾಜ್ಯ ಸರ್ಕಾರದ ವಿರುದ್ದ ಸಂತ್ರಸ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಾರ್ಡ್‌ ನಂ.1,2,3,6, 7 ಮತ್ತು 9ರ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ಕಳೆದುಕೊಳ್ಳುವ ಹಾಗೂ ನಡುಗಡ್ಡೆಯಾಗುವ ಸುಮಾರು 1100ಕ್ಕೂ ಹೆಚ್ಚು ಕಟ್ಟಡಗಳ ಮಾಲೀಕರು ಮತ್ತು ಬಾಡಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಿನ್ನೀರಿನಿಂದಾಗಿ ಈ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆ, ವಿಷಜಂತುಗಳ ಕಾಟ ಹಾಚ್ಚಾಗಿದ್ದು, ರಸ್ತೆ ಸಂಪರ್ಕ ಕಡಿತ, ವಿದ್ಯುತ್ ಮತ್ತು ಕುಡಿಯುವ ನೀರಿನ ಅಭಾವ, ವ್ಯಾಪಾರ-ವಹಿವಾಟು ಸ್ತಬ್ಧವಾಗಿರುವುದು ಹಾಗೂ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ನಿವಾಸಿಗಳಲ್ಲಿ ತೊಂದರೆಯಾಗಿದೆ ಎಂದು ಸಂತ್ರಸ್ತರು ಹೇಳಿದರು.


ನಡುಗಡ್ಡೆ ಪ್ರದೇಶದಲ್ಲಿರುವ ಕಟ್ಟಡಗಳ ಮಾಲೀಕರು ಹಾಗೂ ಬಾಡಿಗೆದಾರರಿಗೆ ಮೊದಲು ಪರ್ಯಾಯ ನಿವೇಶನಗಳನ್ನು ನೀಡಿ ಸ್ಥಳಾಂತರಿಸಬೇಕು. ಆ ನಂತರ ಸೂಕ್ತ ಪರಿಹಾರ ಧನ ವಿತರಿಸಬೇಕು. ಪುನರ್ವಸತಿ ಅಧಿಕಾರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತರು ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ (ಬೆಂಗಳೂರು) ಸಲ್ಲಿಸಿರುವ ಪ್ರಸ್ತಾವನೆಗೆ ತಕ್ಷಣವೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ಯುನಿಟ್ 1 ಮತ್ತು 2 ರಲ್ಲಿ ಸ್ವಚ್ಛತೆಯ ಕೊರತೆಯಿದ್ದು, ಕಸದ ರಾಶಿ ಹಾಗೂ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ನವನಗರ ಕೈಗಾರಿಕೆ ಪ್ರದೇಶದ ತ್ಯಾಜ್ಯ ನೀರು ಸಂಸ್ಕರಣೆ ಘಟಕದ ಆವರಣದಲ್ಲಿ ಅವೈಜ್ಞಾನಿಕವಾಗಿ ಕಸ ಹಾಕಿ ಬೆಂಕಿ ಹಚ್ಚಲಾಗುತ್ತಿದ್ದು, ಸುತ್ತಮುತ್ತಲಿನ ಸಾರ್ವಜನಿಕರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ.

ವೈದ್ಯಕೀಯ ಸೌಲಭ್ಯ, ಪೊಲೀಸ್ ಠಾಣೆ, ಕುಡಿಯುವ ನೀರು, ಸಾರಿಗೆ ಬಸ್ ಸೌಕರ್ಯ, ರಸ್ತೆ ದೀಪ ಹಾಗೂ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಜೊತೆಗೆ ಮುಳ್ಳು ಕಂಟಿಗಳು ಬೆಳೆದು ಕಳ್ಳತನ ಹಾಗೂ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಮಹಿಳೆಯರು ಮತ್ತು ಒಂಟಿ ನಿವಾಸಿಗಳು ಭಯದ ವಾತಾವರಣದಲ್ಲಿ ವಾಸಿಸುವಂತಾಗಿದೆ. ತಕ್ಷಣವೇ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದರು.

ಧರಣಿಯಲ್ಲಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಮುಖಂಡರಾದ ಅಶೋಕ ಲಿಂಬಾವಳಿ, ಸದಾನಂದ ನಾರಾ, ಗುಂಡೂರಾವ ಶಿಂಧೆ, ಸಂಗಯ್ಯ ಸರಗಣಾಚಾರಿ, ರಾಜು ವಾಘ, ಶ್ರೀಕಾಂತ ಪತ್ತಾರ, ಸುರೇಶ ಮಜ್ಜಗಿ, ಗಿರೀಶ ಭಾಂಡಗೆ, ಶ್ರೀನಾಥ ಸಜ್ಜನ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶಶಿಕಲಾ ಮಜ್ಜಗಿ ಸೇರಿದಂತೆ ನಡುಗಡ್ಡೆ ಪ್ರದೇಶದ ಸಂತ್ರಸ್ತರು ಹಾಗೂ ಹಳೇ ಬಾಗಲಕೋಟೆ ಸಂತ್ರಸ್ತರು ಭಾಗವಹಿಸಿದ್ದರು.