ಭಟ್ಕಳ: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಮತ್ತು ಉದ್ಯಮಿ ಮಾಸ್ತಪ್ಪ ನಾಯ್ಕ ಬಲ್ಸೆ ಅವರು ಸಾರ್ವಜನಿಕರೊಡಗೂಡಿ ತಹಸೀಲ್ದಾರ್ ಮತ್ತು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದರು. ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ವೈದ್ಯರ ಕೊರತೆಯಿದ್ದು, ರೋಗಿಗಳು ಪರದಾಡುವ ಪರಿಸ್ಥಿತಿ ಇದೆ. ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡಜನರೇ ಚಿಕಿತ್ಸೆ ಪಡೆಯಲು ಬರುತ್ತಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಜನರು ತೊಂದರೆ ಅನುಭವಿಸುವಂತಾಗಿದೆ. ಗರ್ಭಿಣಿಯರು ಮತ್ತು ವೃದ್ಧರು ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ವಾಹನ ಅಪಘಾತಗಳಾದಾಗ ಸಮಯಕ್ಕೆ ಸರಿಯಾಗಿ ತುರ್ತು ಚಿಕಿತ್ಸೆ ಸಿಗದೇ ಸಾವು ನೋವು ಸಂಭವಿಸಿ ಜನರು ಪರದಾಡುವಂತಾಗಿದೆ.
ಆಸ್ಪತ್ರೆಯಲ್ಲಿ ಸ್ತ್ರೀರೋಗಗ ತಜ್ಞರು, ಕಣ್ಣಿನ ತಜ್ಞರು, ಮೂಳೆ, ತಜ್ಞರು, ಗ್ರೂಪ್ ಡಿ ದರ್ಜೆಯ ನೌಕರರು, ಹೊರಗುತ್ತಿಗೆ ನೌಕರರು ಹಾಗೂ ಫಾರ್ಮಾಸಿಸ್ಟ್‌ಗಳ ಕೊರತೆ ಎದುರಾಗಿದೆ. ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಔಷದಗಳ ಕೊರತೆಯೂ ಇದೆ.ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ನೀಗಿಸುವಲ್ಲಿ ಕ್ಷೇತ್ರದ ಸಚಿವರು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ. ಬಡಜನರ ಹಿತದೃಷ್ಟಿಯಿಂದ ಶೀಘ್ರದಲ್ಲಿ ಆಸ್ಪತ್ರೆಗೆ ತಜ್ಞ ವೈದ್ಯರ ಮತ್ತು ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ಥೆದಾರ ರಾಧಿಕಾ ಶಾಸ್ತ್ರಿ ಮನವಿ ಸ್ವೀಕರಿಸಿದರು. ಸರಕಾರಿ ಆಸ್ಪತ್ರೆಯಲ್ಲೂ ಸಹ ಆಡಳಿತ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಶೋಕ ನಾಯ್ಕ, ವಿಶ್ವ ನಾಯ್ಕ, ಗಣೇಶ ಹಳ್ಳೇರ, ವಿನಾಯಕ ನಾಯ್ಕ ಮುಂತಾದವರಿದ್ದರು.