ಕುಶಾಲನಗರ ಪುರಸಭೆ ಸಂಕೀರ್ಣದ ಪ್ರಾಂಗಣದಲ್ಲಿನ 7 ಅಂಗಡಿ ಮಳಿಗೆಗಳನ್ನು ಆನ್ ಲೈನ್ ಹೊರತುಪಡಿಸಿ ಬಹಿರಂಗ ಹರಾಜು ಮಾಡುವಂತೆ ಮಳಿಗೆ ಬಾಡಿಗೆದಾರರಾದ ಮಹದೇವ್ ಮತ್ತು ಕಿರಣ್ ಸುದ್ದಿಗೋಷ್ಠಿ ಮೂಲಕ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರು.
ಕುಶಾಲನಗರ: ಕುಶಾಲನಗರ ಪುರಸಭೆ ಸಂಕೀರ್ಣದ ಪ್ರಾಂಗಣದಲ್ಲಿನ 7 ಅಂಗಡಿ ಮಳಿಗೆಗಳನ್ನು ಆನ್ ಲೈನ್ ಹೊರತುಪಡಿಸಿ ಬಹಿರಂಗ ಹರಾಜು ಮಾಡುವಂತೆ ಮಳಿಗೆ ಬಾಡಿಗೆದಾರರಾದ ಮಹದೇವ್ ಮತ್ತು ಕಿರಣ್ ಸುದ್ದಿಗೋಷ್ಠಿ ಮೂಲಕ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರು.ಈಗಾಗಲೇ 12 ಅಂಗಡಿ ಮಳಿಗೆಗಳನ್ನು ಬಹಿರಂಗ ಹರಾಜು ನಡೆಸಲಾಗಿದೆ. ಈ ಪೈಕಿ ಹರಾಜುಗೊಂಡು ರಿಜಿಸ್ಟರ್ ಆಗದ 7 ಅಂಗಡಿ ಮಳಿಗೆಗಳನ್ನು ಇ- ಹರಾಜಿಗೆ ಒಳಪಡಿಸಲಾಗಿದೆ. ಇದರಿಂದ ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡು ದುಬಾರಿ ಮೊತ್ತಕ್ಕೆ ಈಗಾಗಲೇ ಮಳಿಗೆಗಳನ್ನು ಖರೀದಿಸಿದವರಿಗೆ ಅನ್ಯಾಯವಾಗಲಿದೆ ಎಂದು ತಿಳಿಸಿದ್ದಾರೆ.ಇ-ಟೆಂಡರ್ ಪ್ರಕ್ರಿಯೆ ಜಠಿಲವಾಗಿರುವ ಕಾರಣ ಉಳಿದ ಮಳಿಗೆಗಳನ್ನು ಬಹಿರಂಗ ಹರಾಜಿಗೊಳಪಡಿಸುವಂತೆ ಒತ್ತಾಯಿಸಿದರು. ಈ ನಡುವೆ ತರಾತುರಿಯಲ್ಲಿ ಒಂದೆರಡು ಅಂಗಡಿಗಳನ್ನು ಪ್ರತ್ಯೇಕವಾಗಿ ಹರಾಜು ನಡೆಸಲು ಮುಂದಾಗಿರುವ ಪುರಸಭೆ ಅಧಿಕಾರಿಗಳ ಕ್ರಮ ಸರಿಯಲ್ಲ. ಈ ಬಗ್ಗೆ ಸ್ಪಷ್ಟನೆ ಕೋರಿದರೆ ಪುರಸಭೆ ಅಧಿಕಾರಿಗಳು ನಮಗೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
5 ಮಳಿಗೆಗಳನ್ನು ಬಹಿರಂಗ ಹರಾಜು ನಡೆಸಿ ಉಳಿದ 7 ಮಳಿಗೆಗಳನ್ನು ಆನ್‌ಲೈನ್ ಹರಾಜು ಮಾಡುತ್ತಿರುವುದು ಅನುಮಾನ ಮೂಡಿಸಿದೆ. ಆನ್‌ಲೈನ್ ಹರಾಜಿನಲ್ಲಿ ಹೆಚ್ಚು ಆಕಾಂಕ್ಷಿಗಳು ಭಾಗವಹಿಸುವುದಿಲ್ಲ. ಭಾಗವಹಿಸಿದರೂ ಕಡಿಮೆ ಮೊತ್ತಕ್ಕೆ ಮಳಿಗೆಗಳು ಹರಾಜಾಗುವ ಸಾಧ್ಯತೆ ಇದೆ. ಇದರಿಂದ 6 ಸಾವಿರ ಮೂಲ ಬಾಡಿಗೆ ನಿಗದಿಪಡಿಸಿದ ಮಳಿಗೆಗಳನ್ನು ದುಪ್ಪಟ್ಟು ಮೊತ್ತಕ್ಕೆ ಹರಾಜಿನಲ್ಲಿ ಖರೀದಿಸಿದ ನಮಗೆ ಅನ್ಯಾಯವಾಗಲಿದೆ ಎಂದು ಮಹಾದೇವ ಮತ್ತು ಕಿರಣ್ ತಿಳಿಸಿದರು. ಆನ್ಲೈನ್ ಬಿಡ್ ಪ್ರಕ್ರಿಯೆಯನ್ನು ತಕ್ಷಣ ಕೈ ಬಿಡುವಂತೆ ಅವರು ಒತ್ತಾಯಿಸಿದರು.