ಸಾರಾಂಶ
ಭಟ್ಕಳ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಜಿಲ್ಲಾ ಹಾಗೂ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಬುಧವಾರ ಕಪ್ಪುಪಟ್ಟಿ ಧರಿಸಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಗ್ರಾಮ ಆಡಳಿತಾಧಿಕಾರಿ ಅವರ ಮೇಲಿನ ದೌರ್ಜನ್ಯವನ್ನು ಖಂಡಿಸಿರುವ ಗ್ರಾಮ ಆಡಳಿತಾಧಿಕಾರಿಯವರ ಸಂಘವು, ದಂಡನೆಯ ಆದೇಶದಲ್ಲಿ ಉಲ್ಲೇಖಿಸಿರುವ ಯಾವುದೇ ತಿಳಿವಳಿಕೆಯನ್ನೂ ಕೂಡ ನೀಡದೇ, ಕೆಸಿಎಸ್‌ಆರ್ ನಿಯಮಗಳನ್ನು ಉಲ್ಲಂಘಿಸಿ ಮನಬಂದಂತೆ ತಮ್ಮ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಧೀನ ನೌಕರರನ್ನು ತಮ್ಮ ಅದೇಶದ ಮೂಲಕ ಶಿಕ್ಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯವರನ್ನು ಕೂಡಲೇ ಚಿಕ್ಕಮಗಳೂರು ಜಿಲ್ಲೆಯಿಂದ ವರ್ಗಾಯಿಸಿ ಇವರು ಮಾಡಿರುವ ಕಾನೂನುಬಾಹಿರ ಮತ್ತು ಅಧೀನ ನೌಕರ ವಿರೋಧಿ ಆದೇಶಗಳನ್ನು ವಿಚಾರಣೆ ನಡೆಸಿ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಂಡು ನೌಕರರಿಗೆ ನ್ಯಾಯ ಒದಗಿಸಬೇಕು. ಇಬ್ಬರನ್ನು ವರ್ಗಾವಣೆ ಮಾಡದಿದ್ದಲ್ಲಿ ಫೆ. 3ರಿಂದ ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬಗೆಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ. ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗುವುದು ತಿಳಿಸಲಾಗಿದೆ. ಕುಮಟಾ ತಾಲೂಕಾಡಳಿತ ಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ವಕೀಲರೊಬ್ಬರು ಆಕ್ಷೇಪಾರ್ಹವಾಗಿ ನಿಂದಿಸಿರುವುದನ್ನು ಖಂಡಿಸಲಾಯಿತು.ಸಂಘದ ಜಿಲ್ಲಾಧ್ಯಕ್ಷ ಚಾಂದ ಬಾಷಾ, ತಾಲೂಕು ಸಂಘದ ಅಧ್ಯಕ್ಷೆ ಲತಾ ನಾಯ್ಕ, ಗೌರವಾಧ್ಯಕ್ಷ ಕೆ ಶಂಭು, ಜಿಲ್ಲಾ ಖಜಾಂಚಿ ಚರಣ ಗೌಡ, ಸಂಘಟನಾ ಕಾರ್ಯದರ್ಶಿ ಗಣೇಶ ಕುಲಾಲ್, ಸದಸ್ಯರಾದ ವಿನುತ, ಶ್ರುತಿ ದೇವಾಡಿಗ, ಭೀಮಣ್ಣ, ಶಬಾನಾ ಬಾನು, ದೀಕ್ಷಿತ, ದಿಪ್ತಿ, ವೀಣಾ, ಐಶ್ವರ್ಯ ಸೇರಿದಂತೆ ಮುಂತಾದವರಿದ್ದರು. ಅಕ್ರಮವಾಗಿ ಮದ್ಯ ಮಾರಾಟ: ವ್ಯಕ್ತಿ ಬಂಧನ
ಶಿರಸಿ: ತಾಲೂಕಿನ ಕೊಪ್ಪ ಗ್ರಾಮದ ದೇವಸ್ಥಾನ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರ ತಾಲೂಕಿನ ಅರೆಹಳ್ಳದ ನಾಗರಾಜ ನಾರಾಯಣ ನಾಯ್ಕ(೩೨) ಬಂಧಿತ ವ್ಯಕ್ತಿ. ಈತ ಕೊಪ್ಪ ಗ್ರಾಮದ ಗಣಪತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುಕೂಲ ಮಾಡಿಕೊಡುತ್ತಿರುವಾಗ ಪಿಎಸ್‌ಐ ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ₹೨೮೦ ಮೌಲ್ಯದ ೯೦ ಎಂಎಲ್‌ನ ಹೈವಾಡ್ಸ್ ಚಿಯರ್ ವಿಸ್ಕಿ ೭ ಟೆಟ್ರಾ ಪ್ಯಾಕ್‌ಗಳು, ೯೦ ಎಂಎಲ್‌ನ ಹೈವಾಡ್ಸ್ ಚಿಯರ್ ವಿಸ್ಕಿ ೨ ಖಾಲಿ ಟೆಟ್ರಾ ಪ್ಯಾಕ್‌ಗಳು ಹಾಗೂ ₹೪೦೦ ನಗದು ಹಾಗೂ ಪ್ಲಾಸ್ಟಿಕ್ ಲೋಟ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.