ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದಲ್ಲಿ ಹೊಸ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಕರೆಯದೇ ಜನಸಾಮಾನ್ಯರ ಬದುಕಿನ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದು, ಕೂಡಲೇ ನೂತನ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಆಡಳಿತ ಸುಧಾರಣಾ ಆಯೋಗವು ಈಗಾಗಲೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಬಿಪಿಎಲ್ ಕಾರ್ಡ್ ಪಡೆಯಲು ಈಗಿರುವ ವಾರ್ಷಿಕ ಆದಾಯಮಿತಿ 1.20 ಲಕ್ಷ ರು.ಗಳಿಂದ 3 ಲಕ್ಷದವರೆಗೆ ಏರಿಸಬೇಕೆಂದು ಶಿಫಾರಸು ಮಾಡಿದೆ. ಇದು ಸ್ವಾಗತಾರ್ಹವಾಗಿದ್ದು, ಈಗಿರುವ 1.20 ಲಕ್ಷ ಆದಾಯ ಮಿತಿಯ 4,56,875 ಬಿಪಿಎಲ್ ಕಾರ್ಡ್‌ಗಳು ರದ್ದಾಗಿದೆ. ಕೂಡಲೇ ಸರ್ಕಾರ ಸುಧಾರಣಾ ಆಯೋಗದ ಶಿಪಾರಸಿನ ಅನ್ವಯ 3 ಲಕ್ಷ ರು.ಗಳಿಗೆ ಆದಾಯಮಿತಿ ಏರಿಸಿ, ಆದೇಶ ಹೊರಡಿಸಲು ಟ್ರಸ್ಟ್ ಸದಸ್ಯರು ಆಗ್ರಹಿಸಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುಗಳು ವಿತರಣೆಯಾಗದೆ, ಅನ್ನಭಾಗ್ಯದ ಅಕ್ಕಿ ಮತ್ತು ಗೃಹಲಕ್ಷ್ಮೀ ಹಣ ದೊರೆಯುತ್ತಿಲ್ಲ. ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ರಾಷ್ಟ್ರೀಯ ಕುಟುಂಬ ಯೋಜನೆ, ವಿಧವಾ ವೇತನ, ಮೈತ್ರಿ ಯೋಜನೆ, ಮನಸ್ವಿನಿ ಯೋಜನೆ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಬಡಜನತೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಇಲ್ಲದೆ ಕೃಷಿಕರಿಗೆ ಮತ್ತು ಬಡವರಿಗೆ ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆಯ ಸೇವೆ ಪಡೆಯಲಾಗುತ್ತಿಲ್ಲ. ಸಬ್ಸಿಡಿ ದರದ ಬಿತ್ತನೆಬೀಜ, ರಸಗೊಬ್ಬರ, ಕೃಷಿ ಉಪಕರಣಗಳನ್ನು ಕೂಡ ಪಡೆಯಲಾಗದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆಹಾರ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದು ನಿರಂತರ ಅನ್ಯಾಯವನ್ನು ಸರಿಪಡಿಸಿ ಲಕ್ಷಾಂತರ ಕುಟುಂಬಗಳಿಗೆ ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುಗಳಿಗೆ ಅರ್ಜಿ ಕರೆದು ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಎಚ್.ಎಂ.ಸಂಗಯ್ಯ, ಶಂಕರಾನಾಯ್ಕ, ಆದಿಶೇಷ, ಬಸವರಾಜ, ಜೀವನಗೌಡ, ರಾಮು ಎಚ್. ಚಿರಾಗ್, ನಾಗರಾಜ ತಡುಗಣಿ ರೋಹಿತ್, ಕುಪ್ಪಯ್ಯ ಇದ್ದರು.