ಬೀರೂರಿಗೆ ಭೇಟಿ ನೀಡಿ ಚುನಾವಣಾ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾಹಿತಿ
ಕನ್ನಡಪ್ರಭ ವಾರ್ತೆ, ಬೀರೂರುಜಿಲ್ಲಾದ್ಯಂತ ಆರಂಭಗೊಳ್ಳುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಅರ್ಹ ಮತದಾರರು ಯಾರೂ ದೂರ ಉಳಿಯದಂತೆ ಬಿಎಲ್‌ಒಗಳ ಸೂಕ್ತ ಕ್ರಮ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಭನ್ವರ್‌ಸಿಂಗ್ ಮೀನಾ ಸೂಚಿಸಿದರು.ಮತದಾರರ ಪಟ್ಟಿಯಲ್ಲಿ ಯಾವುದೇ ಅರ್ಹ ನಾಗರಿಕರು ಬಿಟ್ಟು ಹೋಗಬಾರದು, ಯಾವುದೇ ಅನರ್ಹ ವ್ಯಕ್ತಿಗಳನ್ನು ಸೇರ್ಪಡೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನೀಡಿರುವ ಮಾನದಂಡಗಳಂತೆ ಅಧಿಕಾರಿಗಳು ಕ್ರಮವಹಿಸಿ ಕಾರ್ಯ ನಿರ್ವಹಿಸಬೇಕಿದೆ ಎಂದರು.ಜೂ.30ರಿಂದ ಜು.29ರವರೆಗೆ ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಮತ ದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರ ಮಾಹಿತಿ ಪಡೆದು ಮ್ಯಾಪಿಂಗ್ ಜೋಡಣೆಗೆ ಕ್ರಮ ವಹಿಸಬೇಕಿದೆ. ಈಗಾಗಲೇ ಪ್ರಗತಿಯಲ್ಲಿ ಕುಂಠಿತವಾಗಿರುವ ತಾಲೂಕಿನ ಕಡೂರು, ಬೀರೂರು ಮತಗಟ್ಟೆಗಳ ವ್ಯಾಪ್ತಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ನಿಗಧಿಪಡಿಸಿರುವ ಗುರಿಯನ್ನು ಎರಡ್ಮೂರು ದಿನಗಳೊಗಾಗಿ ಪ್ರಗತಿ ಕಾಣಬೇಕಿದೆ. ಇದಕ್ಕೆ ತಹಸೀಲ್ದಾರ್ ಹೆಚ್ಚಿನ ನಿಗಾವಹಿಸುವಂತೆ ನಿರ್ದೇಶಿಸಿದರು.ಪಟ್ಟಣದ ರೈಲ್ವೇ ಸ್ಟೇಷನ್ ರಸ್ತೆಯ ಕೆಲವು ಬೇರೆ ರಾಜ್ಯದಲ್ಲಿ ಜನಿಸಿ ಸದ್ಯ ಈ ಕಡೂರು ತಾಲೂಕಿನಲ್ಲಿ ಹಲವಾರು ವರ್ಷ ಗಳಿಂದ ನೆಲೆಸಿರುವ ಮರ‍್ವಾಡಿಗಳು ಮತದಾರ ಪಟ್ಟಿ ಮ್ಯಾಪಿಂಗ್ ಒಳಗಾಗದೇ ಇದ್ದವರಿಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಶೇ 100ರಷ್ಟು ಮತದಾರರ ಪಟ್ಟಿ ಪರಿಷ್ಕರಣೆಗೆ ಪ್ರಯತ್ನಿಸುತ್ತಿದ್ದು, ಅದರಂತೆ ಕಡೂರು ತಾಲೂಕಿನಲ್ಲಿ ಅಧಿಕಾರಿ ಗಳ ಎಸ್.ಐ.ಆರ್ ಮ್ಯಾಪಿಂಗ್ ಶೇ. 93.12ರಷ್ಟು ಪೂರ್ಣ. 2002ರಲ್ಲಿ ನೀವು ಯಾವುದೇ ರಾಜ್ಯದಲ್ಲಿ ಜನಿಸಿ ಅಲ್ಲಿ ಮತ ಚಲಾ ಯಿಸಿತ್ತಿರೋ ಅಲ್ಲಿನ ಮತಗಟ್ಟೆ, ಭಾಗದ ಸಂಖ್ಯೆ ಮತ್ತಿತರ ಚುನಾವಣೆ ಮಾಹಿತಿಯನ್ನು ಇಲ್ಲಿನ ಬಿಎಲ್.ಒ ಅಧಿಕಾರಿಗಳಿಗೆ ಕಡ್ಡಾಯವಾಗಿ ನೀಡಿ ಎಂದು ತಿಳಿಸಿದರು. ಜಿಲ್ಲೆಗೆ ಹೊಸದಾಗಿ ಬಂದಿರುವ ನಾನು ಜಿಲ್ಲೆಯ ಆಯಾ ತಾಲೂಕಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದರೆ ಪರಿಹರಿಸಲು ಅನುಕೂಲವಾಗುತ್ತದೆ ಎಂದರು.ನಾಡಕಚೇರಿಗೆ ಭೇಟಿ ನೀಡಿದ ತರೀಕೆರೆ ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಅವರಿಗೆ ಸಾರ್ವಜನಿಕರು ಈ ನಾಡ ಕಚೇರಿ ಕಟ್ಟಡ ಸಂಪೂರ್ಣ ಹಳೆಯದಾಗಿ ಬೀಳುವ ಹಂತದಲ್ಲಿದೆ. ತಾಪಂ ನಿಂದ ಇದನ್ನು ಅಧಿಕಾರಿಗಳು ಕಂದಾಯ ಇಲಾಖೆಗೆ ನೀಡಿ ದ್ದಾರೆ. ಬೀರೂರು ನಾಡ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ತಾತ್ಸಾರ ಮಾಡುತ್ತಿದ್ದಾರೆ. ಈ ನಾಡ ಕಚೇರಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಇದರಿಂದ ಇಲ್ಲಿಗೆ ಬರುವ ರೈತರು, ಕುಡಿಯುವ ನೀರಾಗಲಿ, ಶೌಚಾಲಯಕ್ಕೆ ಅಲೆದಾಡುವಂತಾಗಿದ್ದು ಶೀಘ್ರ ಈ ಹಳೆ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಎಸಿ ನಟೇಶ್ ತಹಸೀಲ್ದಾರ್ ಪೂರ್ಣಿಮಾ ರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಶೀಘ್ರ ಹೊಸ ಕಟ್ಟಡ ನಿರ್ಮಾಣಕ್ಕೆ ಡಿಸಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಪುರಸಭೆ ಆಶ್ರಯ ಕಮಿಟಿ ಸದಸ್ಯ ಚಂದ್ರಶೇಖರ್ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ್ ಕುಡಿಯುವ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಪರಿಶೀಲನೆ ಮಾಡಿ ಎಂಜಿನಿಯರ್ ವಿರುದ್ಧಕ್ರಮ ಕೈಗೊಳ್ಳಬೇಕು. ಜೊತೆಗೆ ಹೊಸ ಅಜ್ಜಂಪುರ ರಸ್ತೆಯಲ್ಲಿ ಫುಟ್ ಪಾತ್ ನ್ನು ಪುರಸಭೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಜೊತೆಗೆ ಪುರಸಭೆ ಅಧಿಕಾರಿಗಳನ್ನು ಎಸ್.ಐ.ಆರ್. ಗೆ ತಾಲೂಕು ಆಡಳಿತ ಬಳಸಿಕೊಂಡಿರುವುದರಿಂದ ಪುರಸಭೆ ಆಡಳಿತ ಯಂತ್ರಕ್ಕೆ ತುಕ್ಕುಹಿಡಿದಂತಾಗಿದೆ. ಸಾರ್ವಜನಿಕರ ದಿನನಿತ್ಯದ ಕೆಲಸಗಳಿಗೆ ಅಡಚಣೆಯಾಗಿ ಪುರಸಭೆ ಅಧಿಕಾರಿಗಳು ಬೆಳಗ್ಗೆ ಮತದಾರ ಪಟ್ಟಿ ಪರಿಷ್ಕರಣೆ ನಡೆಸಿ ಮಧ್ಯಾಹ್ನ ಕಚೇರಿ ಕೆಲಸ ನಡೆಸಿದರೆ ಅನುಕೂಲವಾಗುತ್ತದೆ ಎಂದರು.ಇದಕ್ಕೆ ಉತ್ತರಿಸಿದ ಎಸಿ ನಟೇಶ್ ಸದ್ಯ ತರೀಕೆರೆ, ಚಿಕ್ಕಮಗಳೂರು ಎರಡು ಕಡೆ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಗಳ ಒತ್ತಡ ಹೆಚ್ಚಿದೆ. ಸದ್ಯದಲ್ಲೇ ಸರ್ಕಾರ ಚಿಕ್ಕಮಗಳೂರಿಗೆ ಇನ್ನೊಬ್ಬರನ್ನು ನೇಮಿಸಿದರೆ ತರೀಕೆರೆ ಉಪವಿಭಾಗ ಸಮಸ್ಯೆ ಆಲಿಸಿ ಅವುಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮ, ಚುನಾವಣೆ ನೋಡಲ್ ಅಧಿಕಾರಿಗಳಾದ ದೇವರಾಜ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಉಪತಹಸೀಲ್ದಾರ್ ರವಿಕುಮಾರ್, ಆರ್ ಐ ಶ್ರೀನಿವಾಸ್, ವಿಎ ನವೀನ್, ಶಿಲ್ಪ, ಲಕ್ಷ್ಮಣ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.5 ಬೀರೂರು 1ಬೀರೂರು ಪಟ್ಟಣಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಚುನಾವಣಾ ನೋಡಲ್ ಅಧಿಕಾರಿಗಳನ್ನು ಭೇಟಿ ಮಾಡಿ ಎಸ್.ಐ.ಆರ್.ಬಗ್ಗೆ ಪರಿಶೀಲನೆ ನಡೆಸಿದರು. ಎಸಿ ನಟೇಶ್, ತಹಸೀಲ್ದಾರ್ ಪೂರ್ಣಿಮ ಸೇರಿದಂತೆ ಮತ್ತಿತರರು ಇದ್ದರು.