ದೇವನಹಳ್ಳಿ: ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಮಾವು-ಹಲಸು ಮೇಳ ಆಯೋಜಿಸಲಾಗಿದ್ದು ರಿಯಾಯಿತಿ ದರದಲ್ಲಿ ಹಣ್ಣು ಖರೀದಿಸಿ ಎಂದು ಸಂಪುಟ ದರ್ಜೆ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.

ಪಟ್ಟಣದ ರಾಣಿ ಕ್ರಾಸ್ ಬಳಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿರುವ ರೈತರಿಗೆ ಮಾರುಕಟ್ಟೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಕಲ್ಪಿಸಲು ಮೇಳ ಆಯೋಜಿಸಲಾಗಿದೆ. ವಿವಿಧ ತಳಿಯ ಮಾವು, ಹಲಸು, ನೇರಳೆ ಹಾಗೂ ಇತರೆ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರು ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ ಎಂದರು.

ಮಾವು ಒಂದು ಮಳೆಯಾಶ್ರಿತ ಬೆಳೆ. ಮಾವು ಫಸಲು ಆರಂಭವಾಗುವ ಸಂದರ್ಭದಲ್ಲಿ ರೈತರ ತೋಟಗಳಿಗೆ ತೋಟಗಾರಿಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಯಾವ ರೀತಿಯ ಔಷಧಿ ಸ್ಪ್ರೇ ಮಾಡಬೇಕು, ರೋಗ ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಸಲಹೆ ಸೂಚನೆ ನೀಡಬೇಕು. ಉತ್ತಮ ಇಳುವರಿ ಬಂದು ಒಳ್ಳೆಯ ಬೆಲೆ ಸಿಕ್ಕರೆ ರೈತರಿಗೂ ಅನುಕೂಲ. ಹಾಗಾಗಿ ಅಧಿಕಾರಿಗಳು ಮಾವು ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದು ಹೇಳಿದರು.

*ಸಸ್ಯ ಸಂತೆ*


ಮೇಳದಲ್ಲಿ ಸಸ್ಯ ಸಂತೆ ಏರ್ಪಡಿಸಿದ್ದು ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ/ಸಸಿ ಗಿಡಗಳನ್ನು ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಇಲಾಖೆ ನಿಗದಿ ಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಸಸ್ಯ ಸಂತೆಯಲ್ಲಿ ಮಾವು, ಸೀಬೆ, ತೆಂಗು, ನೆರಳೆ, ಕರಿಬೇವು, ನಿಂಬೆ, ಸಪೋಟ, ಮಲ್ಲಿಗೆ ಹಾಗೂ ಇತ್ಯಾದಿ ಕಸಿ/ಸಸಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ.

ಮೇಳದಲ್ಲಿ ಬಗೆಬಗೆಯ ಮಾವು-ಹಲಸು

ಮಿಯಾ ಜಾಕಿ, ತೋತಾಪುರಿ, ಸೇಂದೂರ, ಬಂಗನಪಲ್ಲಿ, ಬಾದಾಮಿ, ರಸಪೂರಿ, ಮಲ್ಲಿಕಾ, ಕೇಸರ್, ದಶೇರಿ, ಕುಲ್ ಪಂದ್, ಹಿಮಾಪಸಂದ್,ಮಲಗೋವ, ಸಕ್ಕರೆಗುತ್ತಿ, ಡ್ರಾಗನ್ ಪ್ರೋಟ್ಸ್, ಸೀಬೆ, ಹಲಸು (ತೂಬಗೆರೆ), ನೇರಳೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಸಿಇಒ ಡಾ.ವಾಸಂತಿ ಅಮರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಗುಣವಂತ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ, ಗ್ಯಾರಂಟಿ ಯೋಜನೆ ಅನು?ನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು, ಗ್ರಾಹಕರು ಇದ್ದರು.