ಕನಕಗಿರಿ: ಒಳ ಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ಮಾದಿಗ ಮಹಾಸಭಾ ಕನಕಗಿರಿ ತಾಲೂಕು ಘಟಕದಿಂದ ಶಾಸಕರ ಮನೆಗೆ ಮುತ್ತಿಗೆ ಹಾಕಿ ಸಚಿವ ಶಿವರಾಜ ತಂಗಡಗಿಯ ಆಪ್ತ ಸಹಾಯಕ ವೆಂಕಟೇಶಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಅಧ್ಯಕ್ಷ ನಿಂಗಪ್ಪ ಪೂಜಾರ ಮಾತನಾಡಿ, ಒಳ ಮೀಸಲಾತಿ ವಿಧೇಯಕವು ರಾಜ್ಯಪಾಲರ ಸಹಿ ಪಡೆದು ಅನುಮೋದನೆಗೊಂಡಿದೆ ಎಂದು ಸಂತೋಷಪಡುವ ಸಂದರ್ಭದಲ್ಲಿ ಒಳ ಮೀಸಲಾತಿ ಅನ್ವಯವಾಗದಂತೆ ೫೬ ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ ಎನ್ನುವ ಸಚಿವ ಸಂಪುಟದ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಘೋರ ಅನ್ಯಾಯವಾಗಿದೆ. ಆ ಮೂಲಕ ೩೫ ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹ ಎಸಗಲಾಗಿದೆ. ಸರ್ಕಾರದ ಈ ತೀರ್ಮಾನ ಒಳ ಮೀಸಲಾತಿ ಹೋರಾಟಗಾರರು, ಸಾಮಾಜಿಕ ನ್ಯಾಯದ ಪರವಿರುವ ಪ್ರಜ್ಞಾನಂತರೆಲ್ಲರೂ ಖಂಡಿಸುವಂತ ನಿರ್ಧಾರವಾಗಿದೆ.

ಚುನಾವಣೆ ಪೂರ್ವದಲ್ಲಿ ಸರ್ಕಾರ ಬಂದ ಮೊದಲ ಅಧಿವೇಶನದಲ್ಲಿಯೇ ಒಳ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಚಿತ್ರದುರ್ಗ ಸಮಾವೇಶದಲ್ಲಿಯೂ ಅದೇ ಭರವಸೆ ನೀಡಿತ್ತು. ಆದರೆ, ಸರ್ಕಾರ ಬಂದು ಮೂರು ವರ್ಷಗಳಾದರೂ ಸಹ ಇದುವರೆಗೆ ನೀಡಿದ ಭರವಸೆ ಈಡೇರಿಸಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಹೋರಾಟದ ಒತ್ತಡಕ್ಕೆ ಮಣಿದು ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಗೆ ತರುತ್ತೇವೆಂದು ತಾತ್ವಿಕವಾಗಿ ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿರುತ್ತದೆ. ಆದರೆ, ಇದುವರೆಗೆ ಈಡೇರಿಸಿಲ್ಲ. ಇದೀಗ ಒಳ ಮೀಸಲಾತಿ ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ ಹೊರಡಿಸಿರುವ ಸರ್ಕಾರದ ಆದೇಶ ತಕ್ಷಣವೇ ಹಿಂಪಡೆಯಬೇಕು ಮತ್ತು ನೇಮಕಾತಿಯಲ್ಲಿ ಒಳಮೀಸಲಾತಿ ಕಡ್ಡಾಯಗೊಳಿಸಿ ಜಾರಿಗೆ ತರಬೇಕು. ಪಪಂ,ಪಜಾ ಜನಾಂಗದವರಿಗೆ ಶೇ. ೭.೫ ಹಾಗೂ ಶೇ.೧೭ರಷ್ಟು ಮೀಸಲಾತಿ ನೀಡಿ ೫೬ ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸುಭಾಷ್ ಕಂದಕೂರು, ಈರಪ್ಪ, ನಿಂಗಪ್ಪ ಮ್ಯಾಗಡೆ, ಮರಿಯಪ್ಪ, ಚಂದ್ರಶೇಖರ ಮೋಚಿ, ಶಾಂತಪ್ಪ ಬಸರಿಗಿಡ, ಕನಕಪ್ಪ ಮ್ಯಾಗಡೆ, ಮಂಜಪ್ಪ ಮ್ಯಾಗಡೆ, ಕನಕಪ್ಪ ಮ್ಯಾಗಡೆ, ನಾಗಪ್ಪ ಮ್ಯಾಗಡೆ, ವೆಂಕಟೇಶ್ ಪೂಜಾರಿ, ಬಾಲರಾಜ್, ಹನುಮೇಶ್ ಮ್ಯಾಗಡೆ, ಧ್ರುವ ಮ್ಯಾಗಡೆ, ಕನಕರಾಯ ಜವಳಗೇರಿ, ರಮೇಶ ಹುಲಿಹೈದರ, ನರಸಪ್ಪ ಕುರುಗೋಡು, ಸಂತೋಷ ಹುನಗುಂದ, ಮಂಜುನಾಥ ಕಾಟಾಪುರ, ಯಮನೂರಪ್ಪ ಕಾಟಾಪುರ, ಸೋಮನಾಥ ಜೀರಾಳ, ಶರಣಪ್ಪ ಪೂಜಾರ, ಯಮನೂರಪ್ಪ ಕಟ್ಟಿಮನಿ ಸಣ್ಣಪ್ಪ, ಪರಸಪ್ಪ ಮಾದಿನಾಳ ಇತರರಿದ್ದರು.