ಕನ್ನಡಪ್ರಭ ವಾರ್ತೆ ಯಲ್ಲಾಪುರ
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪ.ಜಾತಿ, ಪ.ಪಂಗಡಗಳ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿಯ ₹೩೯ ಸಾವಿರ ಕೋಟಿಗಳನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಆರೋಪಿಸಿದರು.ಗುರುವಾರ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ, ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆಯ ಹಣವನ್ನು ಪ.ಜಾತಿ, ಪ.ಪಂಗಡಗಳಿಗೆ ಮಾತ್ರ ಬಳಸಬೇಕು. ಆದರೆ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಅನುಷ್ಠಾನಕ್ಕಾಗಿ ದಲಿತರ ಮೀಸಲು ನಿಧಿ ಬಳಸಿರುವುದು ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೦೨೩-೨೪ನೇ ಸಾಲಿನಲ್ಲಿ ₹೧೧,೧೪೪ ಕೋಟಿ, ೨೦೨೪-೨೫ನೇ ಸಾಲಿನಲ್ಲಿ ₹೧೪,೨೮೨ ಕೋಟಿ ಹಾಗೂ ೨೦೨೫-೨೬ನೇ ಸಾಲಿನಲ್ಲಿ ₹ ೧೩,೪೩೩ ಕೋಟಿ ಸೇರಿ ಒಟ್ಟು ₹೩೮,೮೫೯ ಕೋಟಿಯನ್ನು ಎಸ್.ಸಿ., ಎಸ್.ಟಿ ಸಮುದಾಯದ ಅನುದಾನವನ್ನು ಗ್ಯಾರಂಟಿಗಾಗಿ ದುರ್ಬಳಕೆ ಮಾಡಲಾಗಿದೆ. ಪ್ರಸ್ತುತ ₹೧೫ ಸಾವಿರ ಕೋಟಿಯನ್ನು ಪ್ರಸಕ್ತ ಬಜೆಟ್‌ನಲ್ಲಿಯೂ ದುರ್ಬಳಕೆ ಮಾಡಲು ಯೋಜನೆ ಸಿದ್ಧವಾಗಿದೆ ಎಂದರು.೭ಡಿ ಕಾಯ್ದೆಯನ್ನು ಕಿತ್ತು ಹಾಕಿ ಎಸ್.ಸಿ.ಎಸ್.ಪಿ ಯೋಜನೆಯನ್ನು ಬಲಪಡಿಸಿದ್ದು ತಾನು ಎಂದು ಬೆನ್ನು ತಟ್ಟಿಕೊಳ್ಳುವ ಸಿದ್ದರಾಮಯ್ಯ, ದಲಿತರ ಮೀಸಲು ನಿಧಿಗೆ ಕನ್ನ ಹಾಕುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರಸಕ್ತ ಬಜೆಟ್‌ನಲ್ಲಿ ಪ.ಜಾತಿ, ಪ.ಪಂಗಡಗಳ ಮೀಸಲು ಅನುದಾನವನ್ನು ಗ್ಯಾರಂಟಿಗೆ ಮೀಸಲಿರಿಸುವುದಿಲ್ಲ ಎಂಬ ಘೋಷಣೆಯನ್ನು ಮುಖ್ಯಮಂತ್ರಿಗಳು ಮೊದಲೇ ಮಾಡಬೇಕು. ಮೂರು ವರ್ಷಗಳಿಂದ ದುರ್ಬಳಕೆ ಆದ ಹಣವನ್ನು ಮರಳಿ ನೀಡಬೇಕು. ಎಲ್ಲ ಜಿಲ್ಲೆಯ ದಲಿತರಿಗೆ ಮೂಲ ಸೌಲಭ್ಯ ಒದಗಿಸಲು ತಲಾ ₹ಒಂದು ಸಾವಿರ ಕೋಟಿ ನೀಡಬೇಕು. ದುರ್ಬಳಕೆಗೆ ದಾರಿ ಮಾಡಿಕೊಡುತ್ತಿರುವ ೭ಸಿ ಕಾಯ್ದೆಯನ್ನು ರದ್ದು ಮಾಡಬೇಕು. ಸಂವಿಧಾನ ರಕ್ಷಣಾ ಅಭಿಯಾನಕ್ಕೆ ಸರ್ಕಾರದಿಂದ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ತುರ್ತಾಗಿ ಕ್ರಮ ಆಗದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. ಪಪಂ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್, ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ಸಿದ್ದಿ ಇತರರಿದ್ದರು.