ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಹೊರವಲಯದಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಲಿ(ಕೆಎಚ್‌ಬಿ) ನಿರ್ಮಿಸಿರುವ ಬಡಾವಣೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ನಿವಾಸಿಗಳು ಯೋಗ ಮಾಡುವ ಮೂಲಕ ಮೌನ ಪ್ರತಿಭಟನೆ ನಡೆಸಿದರು.

ಬಡಾವಣೆಯ ಬುದ್ಧ, ಬಸವ, ಅಂಬೇಡ್ಕರ್ ಯೋಗ ಕೇಂದ್ರದ ಆವರಣದಲ್ಲಿ ಯೋಗ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ ನಿವಾಸಿಗಳು, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ನಿರ್ಮಿಸಿರುವ ಬಡಾವಣೆ ಪಟ್ಟಣದ ಹೊರವಲಯದಲ್ಲಿದ್ದರೂ ತಾಲೂಕಿನ ಹಿರೀಕಳಲೆ ಗ್ರಾಪಂ ವ್ಯಾಪ್ತಿಗೆ ಸೇರುತ್ತದೆ. ಮನೆಗಳನ್ನು ನಿರ್ಮಿಸಿದ ಹೌಸಿಂಗ್ ಬೋರ್ಡ್ ನಿವಾಸಿಗಳಿಗೆ ಯಾವುದೇ ರೀತಿಯ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆ ಜನರಿಗೆ ಅಗತ್ಯವಾದ ಕುಡಿಯುವ ನೀರು, ಸಮರ್ಪಕ ರಸ್ತೆ, ಕಸ ವಿಲೇವಾರಿ ಸೇರಿದಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ನಿವಾಸಿಗಳಿಗಾಗಿ ಮೇಜರ್ ಟ್ಯಾಂಕ್ ನಿರ್ಮಿಸಿದ್ದರೂ ಅದಕ್ಕೆ ನೀರಿನ ಸಂಪರ್ಕ ವ್ಯವಸ್ಥೆಯಿಲ್ಲ. ಬಡಾವಣೆಯಲ್ಲಿ ಪತ್ರಿವರ್ಷ ಹೊಸ ಹೊಸ ಮನೆಗಳು ನಿರ್ಮಾಣವಾಗುತ್ತಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿದ್ದರೂ ಮನೆ ಕಟ್ಟುತ್ತಿರುವವರೆಲ್ಲರೂ ಸ್ವಂತ ಬೋರ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಗೃಹ ನಿವಾಸಿಗಳು ಕುಡಿಯುವ ನೀರಿಗೆ ಸ್ವಂತ ಬೋರ್ ವೆಲ್ ಕೊರೆಸಿಕೊಳ್ಳುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದು ಬೋರ್ ವೆಲ್ ಗಳಲ್ಲೂ ಸಮರ್ಪಕ ನೀರು ಬರುತ್ತಿಲ್ಲ ಎಂದು ಕಿಡಿಕಾರಿದರು.

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಿರೀಕಳಲೆ ಗ್ರಾಪಂ ಎದುರು ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನಾದ್ಯಂತ ಜಲ ಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದೆ. ಜಲ ಜೀವನ್ ಯೋಜನೆಯ ಮನೆ ಮನೆಗೆ ಗಂಗೆ ಮೂಲಕ ಅಗತ್ಯ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಯೋಗ ಕೇಂದ್ರದ ಯೋಗಗುರು ಎಸ್.ಎಂ.ಅಲ್ಲಮಪ್ರಭು, ಐಸಿಎಲ್ ಇಂದ್ರಕುಮಾರ್, ಬಿ.ಸುರೇಶ್, ಶಿ ರಮ್ಯಪ್ರದೀಪಗೌಡ, ಅಮಿತ್, ನಂದಿನಿ ಪ್ರಕಾಶ್, ಪಾವನ ವಿಜಯಕುಮಾರ, ಸ್ವಂದನಾ, ಮೈತ್ರಿ ಜಯರಾಮ್, ತೀಕ್ಷ್ಣ, ವೈಭವಶೆಟ್ಟಿ, ಮೋನಿಷ, ಶ್ರೇಯಸ್ ಹಲವರು ಭಾಗವಹಿಸಿದ್ದರು.