ಗದಗ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಪಪೂ ಕಾಲೇಜುಗಳ ಪ್ರಾಚಾರ್ಯರ ಸಂಘ, ರಾಜ್ಯ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘ ಜಿಲ್ಲಾ ಶಾಖೆ, ರಾಜ್ಯ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘ ಜಿಲ್ಲಾ ಶಾಖೆ ಹಾಗೂ ರಾಜ್ಯ ಪಪೂ ಶಿಕ್ಷಣ ಇಲಾಖೆ ಬೋಧಕೇತರ ನೌಕರರ ಸಂಘದ ಆಶ್ರಯದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಸೋಮಣ್ಣವರ, ಜಿಲ್ಲಾ ಪದವಿ ಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಎಂ.ಸಿ. ಕಟ್ಟಿಮನಿ ಮಾತನಾಡಿ, ಜಿಲ್ಲಾ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸುವ ಕುರಿತು ಪ್ರಸ್ತಾಪಿತ ಸರ್ಕಾರದ ಕಡತ ಸಂಖ್ಯೆ ಎಪಿ 10 ಡಿಜಿಡಿ 2026ಅನ್ನು ಕೂಡಲೇ ಹಿಂಪಡೆಯಬೇಕು.

ಪಪೂ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ಪಪೂ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾಯಿಸಬೇಕು. ಪಪೂ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಇರುವ 320:1 ವಿದ್ಯಾರ್ಥಿ- ಉಪನ್ಯಾಸಕರ ಅನುಪಾತವನ್ನು ಎನ್‌ಸಿಇಆರ್‌ಟಿ ಮಾರ್ಗಸೂಚಿಗಳನ್ವಯ ಮರು ನಿಗದಿಪಡಿಸಬೇಕು.

ಕಳೆದ ಮೂರು ವರ್ಷಗಳಿಂದ ಪರಿಷ್ಕರಿಸದಿರುವ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆಯನ್ನು ತಕ್ಷಣ ಪರಿಷ್ಕರಿಸಿ, ಹಿಂದಿನ ವರ್ಷದ ಬಾಕಿ ಇರುವ ಸಂಭಾವನೆಗಳನ್ನು ತಕ್ಷಣ ಪಾವತಿಸಬೇಕು. ಪ್ರಥಮ ಅದ್ಯತೆಯಾಗಿ ಸಂಭವಾನೆಗಳನ್ನು ಖಾಸಗಿ ಪಪೂ ಕಾಲೇಜುಗಳ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರಿಗೆ ವಿತರಿಸಬೇಕು. ಕಾರ್ಯಭಾರ ಕೊರತೆ ಇರುವ ಅನುದಾನಿತ ಪಪೂ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಆದೇಶವನ್ನು ಹಿಂಪಡೆದು, ಅವರಿಗೆ ಸಮೀಪದ ಸರ್ಕಾರಿ ಪಪೂ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವೇಳೆ ಎಸ್.ಎಸ್. ಸೋಮಣ್ಣವರ, ಎಸ್.ಎಚ್. ಬೀರಕಬ್ಬಿ, ಐ.ಪಿ. ಹಾದಿಮನಿ, ಕಿರಣ್ ಮುಂಡರಗಿ, ಜಮಾದಾರ, ಎಸ್.ಐ. ಮೇಟಿ, ಬಿ.ವಿ. ಪಾಟೀಲ, ಕೆ. ವೆಂಕಟೇಶ, ಕೃಷ್ಣಮೂರ್ತಿ, ಅವಾರಿ, ಎಸ್.ಎಸ್. ನರಗುಂದ, ಉಗಲಾಟದ, ಅಕ್ಷತಾ ಎಳ್ಳುರ, ಸುಪ್ರಿಯಾ ಸೇರಿದಂತೆ ಇತರರು ಇದ್ದರು.