ಕಾರಟಗಿ: ಭವ್ಯ ಭಾರತದ ಆನಾದಿ ಕಾಲದ ಋಷಿ ಮುನಿಗಳಾದಿಯಾಗಿ ನಡೆಸಿಕೊಂಡ ಬಂದ ಅಗ್ನಿಹೋತ್ರ ಮಹಾಯಜ್ಞವು ನಮ್ಮ ಪರಿಸರ ಶುದ್ಧೀಕರಿಸಿ,ಮಾನಸಿಕ ಶಾಂತಿ, ದೈಹಿಕ ಶಕ್ತಿ ಮತ್ತು ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಹೇಳಿದರು.
ಇಲ್ಲಿನ ಎಲ್‌ವಿಟಿ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಸಮಿತಿ ಗುರುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ,ಗರ್ಭಿಣಿಯರಿಗಾಗಿ ವಿಶೇಷ ಗರ್ಭ ಸಂಸ್ಕಾರ ಹಾಗೂ ೧೦೮ ಅಗ್ನಿಹೋತ್ರ ಮಹಾಯಜ್ಞ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಗ್ನಿಹೋತ್ರ ಮಹಾಯಜ್ಞವು ಒಂದು ಸರಳ ಪುರಾತನ ಪ್ರಕ್ರಿಯೆ.ಇದು ನರಮಂಡಲ ಉತ್ತೇಜಿಸಿ ರೋಗಾಣು ನಾಶಪಡಿಸಿ,ಆರೋಗ್ಯಕರ ಹಾಗೂ ಸುಖಮಯ ಜೀವನಕ್ಕೆ ನೆರವಾಗುತ್ತದೆ. ಅಗ್ನಿಹೋತ್ರವು ಪ್ರಾಚೀನ ವೇದಗಳಿಂದ ಬಂದ ಸರಳ ಗುಣಪಡಿಸುವ ಬೆಂಕಿಯಾಗಿದ್ದು, ಮಹಾಯಜ್ಞ ಮನುಷ್ಯ ಎದುರಿಸುತ್ತಿರುವ ಒತ್ತಡ ಕಡಿಮೆ ಮಾಡುತ್ತದೆ. ಚಿಂತನೆಯ ಸ್ಪಷ್ಟತೆಗೆ ಕಾರಣವಾಗುತ್ತದೆ. ನಮ್ಮಲ್ಲಿ ಹೆಚ್ಚಿನ ಶಕ್ತಿ ತುಂಬಿ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತದೆ ಎಂದು ಯಜ್ಞದ ಮಹತ್ವದ ತಿಳಿಸಿದರು.
ರಾಯಚೂರಿನ ಡಾ. ಸುಪ್ರಿತಾ ಮಾತನಾಡಿ, ಗರ್ಭಾವಸ್ಥೆಯಲ್ಲಿದ್ದಾಗ ಮಹಿಳೆಯರ ಪ್ರತಿಯೊಂದು ಚಟುವಟಿಕೆ ಮಗುವಿನ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಈ ನಿಟ್ಟಿನಲ್ಲಿ ಗರ್ಭಿಣಿಯರು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವ ಅಗತ್ಯವಿದ್ದು, ಆಹಾರ ಕ್ರಮ, ಯೋಗಾಭ್ಯಾಸ ಹಾಗೂ ಕ್ರಿಯಾಶೀಲವಾಗಿ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಪತಂಜಲಿ ಯೋಗಪೀಠದ ಸಹ ರಾಜ್ಯ ಪ್ರಭಾರಿ ಸಿ.ಎಚ್. ಶರಣಪ್ಪ ಹಾಗೂ ತಾಲೂಕು ಪ್ರಭಾರಿ ಪ್ರಸಾದ ಚಿಟ್ಟೂರಿ ಮಾತನಾಡಿ, ಪತಂಜಲಿ ಸಮಿತಿಯ ಕಾರ್ಯಕ್ರಮಗಳಲ್ಲಿ ಇತ್ತೀಚಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದೃಢ, ಬಲಿಷ್ಠ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಗರ್ಭಿಣಿಯರಿಗೆ ಗರ್ಭ ಸಂಸ್ಕಾರ ಕಾರ್ಯಕ್ರಮ ಹಾಗೂ ವಿಶೇಷ ಅಗ್ನಿ ಹೋತ್ರ ಮಹಾಯಜ್ಞದಲ್ಲಿ ಗರ್ಭಿಣಿಯರು ಸೇರಿದಂತೆ ೨೦೦ಕ್ಕೂ ಹೆಚ್ಚು ಜನ ಸೇರಿರುವುದು ಸಂತಸದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿ ಕೆ.ನಾಗಪ್ಪ, ಸಹಕಾರಿ ಧುರೀಣೆ ಮಂಜುಳಾ ಪಾಟೀಲ್ ಸಿಂಧನೂರು, ಮಹಿಳಾ ಜಿಲ್ಲಾ ಪ್ರಭಾರಿ ಸಿ.ಎಚ್. ಮೀನಾಕ್ಷಿ ಸೇರಿ ಇನ್ನಿತರರು ಇದ್ದರು.ಶರಣೇಗೌಡ ಬೂದಗುಂಪಾ ಮತ್ತು ಶರಣಪ್ಪ ಹುರಕಡ್ಲಿ ಕಾರ್ಯಕ್ರಮ ನಿರ್ವಹಿಸಿದರು.