ಗದಗ: 101 ದೇಗುಲ, ಬಾವಿಗಳ ಐತಿಹ್ಯವಿರುವ ಇತಿಹಾಸ ಪ್ರಸಿದ್ಧ ಲಕ್ಕುಂಡಿಯ ಭೂಗರ್ಭದಲ್ಲಿ ಅಡಗಿರುವ ಮೌಲ್ಯಯುತ ಪ್ರಾಚ್ಯಾವಶೇಷಗಳನ್ನು ಪತ್ತೆ ಹಚ್ಚುವ ಪ್ರಯತ್ನವಾಗಿ ಕಳೆದ 47 ದಿನಗಳಿಂದ ಇಲ್ಲಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂದಿನ ಆವರಣದಲ್ಲಿ ನಡೆದ ಉತ್ಖನನ ಕಾರ್ಯ ಬುಧವಾರ ಸಂಜೆ ಅಧಿಕೃತವಾಗಿ ಮುಕ್ತಾಯಗೊಂಡಿತು.ಕಳೆದ ಜ. 10ರಂದು ಗಂಗವ್ವ ರಿತ್ತಿ ಅವರ ಜಾಗದಲ್ಲಿ ನಿಧಿ ದೊರೆತ ಬೆನ್ನಲ್ಲೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಉತ್ಖನನ ಕಾರ್ಯವು ಬುಧವಾರ ಸಂಜೆ ಪುರಾತತ್ವ ಇಲಾಖೆಯ ನಿಯಮದಂತೆ ಸುಮಾರು 14 ಅಡಿ ಆಳ ತೆಗೆದ ಉತ್ಖನನ ಸ್ಥಳವನ್ನು ಪ್ಲಾಸ್ಟಿಕ್ ತಾಡಪತ್ರಿ ಹಾಕಿ ನಂತರ ಉತ್ಖನನ ಮಾಡಿ ತೆಗೆದ ಮಣ್ಣನ್ನೇ ಹಾಕಿ ಮುಚ್ಚುವ ಕಾರ್ಯ ನಡೆಯಿತು.10x10 ಮೀಟರ್‌ ಅಳತೆಯ 4 ಬಾಕ್ಸ್‌ಗಳನ್ನು ರಚಿಸಿ ಸುಮಾರು 30ರಿಂದ 35 ಕಾರ್ಮಿಕರು 47 ದಿನಗಳ ಕಾಲ ಉತ್ಖನನ ಕಾರ್ಯದಲ್ಲಿ ಪಾಲೊಂಡಿದ್ದರು. 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ದೊರೆತು ರಾಜ್ಯದ ಗಮನ ಸೆಳೆದಿತ್ತು. ಪ್ರತಿನಿತ್ಯ ಸುತ್ತಮುತ್ತಲಿನ ಜನ ಮತ್ತು ಶಾಲಾ ವಿದ್ಯಾರ್ಥಿಗಳು ವೀಕ್ಷಿಸಲು ಆಗಮಿಸಿದ್ದರು.ತಜ್ಞರ ಭೇಟಿ: ಕಳೆದ ಮಂಗಳವಾರ ಉತ್ಖನನ ಸ್ಥಳಕ್ಕೆ ಇತಿಹಾಸ ತಜ್ಞರು ಭೇಟಿ ನೀಡಿ ಉತ್ಖನನ ಸ್ಥಳವನ್ನು ಪರಿಶೀಲಿಸಿದ್ದರು. ಇಲ್ಲಿ ದೊರೆತಿರುವ ಪ್ರಾಚ್ಯಾವಶೇಷಗಳ ಮಹತ್ವ, ಕಾಲಮಾನವನ್ನು ಅಧ್ಯಯನ ಮಾಡಿದ ನಂತರ ಗೊತ್ತಾಗಲಿದೆ. ಇಲ್ಲಿ ಕೋಟೆ ಗೋಡೆಯ ತಳಪಾಯ ಇರಬಹುದೆಂದು ತಜ್ಞರು ಅಂದಾಜಿಸಿದ್ದಾರೆ ಎಂದು ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.ಉತ್ಖನನ ಪೂರ್ಣ: ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಉತ್ಖನನ ಕಾರ್ಯ ಪೂರ್ಣಗೊಂಡಿದೆ. ಮಾ. 30ರಂದು ವೀರಭದ್ರೇಶ್ವರ ಜಾತ್ರೆ ಇದ್ದು, ಧಾರ್ಮಿಕ ಕಾರ್ಯಗಳಿಗೂ ಅನುಕೂಲ ಮಾಡಿಕೊಡಲು ಉತ್ಖನನ ಮಾಡಿರುವ ಸ್ಥಳವನ್ನು ಮುಚ್ಚಲಾಗುತ್ತಿದೆ. ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅನುಮತಿಯೊಂದಿಗೆ ಗ್ರಾಮದ ಇತರೆ ಸ್ಥಳದಲ್ಲಿ ಉತ್ಖನನ ಮಾಡುವ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರ ಗಮನದಲ್ಲಿದೆ ಎಂದು ಆಯುಕ್ತರು ತಿಳಿಸಿದರು.

ಪೂರ್ಣವಿರಾಮ: ಇತಿಹಾಸ ತಜ್ಞರ ಸ್ಥಳ ಪರಿಶೀಲನೆ ನಂತರ ಉತ್ಖನನ ಕಾರ್ಯಕ್ಕೆ ಪೂರ್ಣವಿರಾಮ ಹಾಕಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಇತಿಹಾಸ ತಜ್ಞರ ಸೂಚನೆಯಂತೆ ಕೇಂದ್ರ ಸರ್ಕಾರದ ಅನುಮತಿ ಪಡೆದು ಲಕ್ಕುಂಡಿ ಗ್ರಾಮದ ಇನ್ನೂ 6- 8 ಸ್ಥಳದಲ್ಲಿ ಉತ್ಖನನ ಕಾರ್ಯ ಮಾಡುವ ವಿಚಾರವಿದೆ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದರು.