ಕೊಪ್ಪಳ:ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಮಸ್ತ ಆ್ಯಪ್ ಬಳಕೆಯಿಂದ ಎದುರಾಗಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆ ತಕ್ಷಣ ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ವಿವಿಧ ತಾಲೂಕುಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕುಕುನೂರು, ಯಲಬುರ್ಗಾ, ಮುದೋಳ, ಬೇವೂರು, ಗುನ್ನಾಳ, ವಜ್ರಬಂಡಿ, ಹುಲಗಿ, ಗಂಗಾವತಿ ಸೇರಿದಂತೆ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ಸಂಬಂಧಿತ ವೈದ್ಯಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ತಮ್ಮ ಸಮಸ್ಯೆ ವಿವರಿಸಿದರು.ಆಶಾ ಕಾರ್ಯಕರ್ತೆಯರಿಗೆ ಇಲಾಖೆಯಿಂದ ಗುಣಮಟ್ಟದ ಮೊಬೈಲ್ ಅಥವಾ ಟ್ಯಾಬ್ಲೆಟ್ ನೀಡದೇ ಡಿಜಿಟಲ್ ಕಾರ್ಯ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಮೊಬೈಲ್ ಬಳಕೆಗೆ ನೀಡುತ್ತಿದ್ದ ಭತ್ಯೆ ಸ್ಥಗಿತಗೊಳಿಸಿರುವುದರಿಂದ ವೈಯಕ್ತಿಕ ಮೊಬೈಲ್‌ಗಳಲ್ಲಿಯೇ ಇಲಾಖೆಯ ಆ್ಯಪ್ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೂರಿದರು.
ಸಮಸ್ತ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಿದ ಬಳಿಕ ದಾಖಲೆ ಕಣ್ಮರೆಯಾಗುವುದು, ಮಾಹಿತಿ ಸಂಗ್ರಹವಾಗದಿರುವುದು, ಒಂದೇ ಮಾಹಿತಿ ಪುನರಾವರ್ತಿತವಾಗಿ ದಾಖಲಾಗುವುದು (ಡುಪ್ಲಿಕೇಟ್ ಎಂಟ್ರಿ), ತಾಂತ್ರಿಕ ದೋಷಗಳಿಂದ ಕೆಲಸ ನಿರ್ವಹಿಸಲು ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಡಿಜಿಟಲ್ ದಾಖಲಾತಿಗಳ ಹೆಸರಿನಲ್ಲಿ ಹೆಚ್ಚುವರಿ ಹೊರೆ ಹೇರಲಾಗುತ್ತಿರುವುದರಿಂದ ಮನೆ ಮನೆಗೆ ತೆರಳಿ ಆರೋಗ್ಯ ಸೇವೆ ನೀಡುವ ಮೂಲ ಜವಾಬ್ದಾರಿಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ತಾಂತ್ರಿಕ ದೋಷ ಸಂಪೂರ್ಣವಾಗಿ ಸರಿಪಡಿಸಿ, ಅಗತ್ಯ ಮೂಲಸೌಕರ್ಯ ಹಾಗೂ ಸಾಧನ ಒದಗಿಸುವವರೆಗೆ ಸಮಸ್ತ ಆ್ಯಪ್ ಬಳಕೆ ಕಡ್ಡಾಯಗೊಳಿಸಬಾರದು ಎಂದು ಸಂಘ ಆಗ್ರಹಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ, ತಾಲೂಕಾಧ್ಯಕ್ಷೆ ಶಂಕ್ರಮ್ಮ ಹಳ್ಳಿಕೇರಿ, ವಿಜಯಲಕ್ಷ್ಮಿ ಆಚಾರ್, ಸುನಿತಾ ಹುಲಗಿ, ಗಾಯತ್ರಿ ಸೇರಿದಂತೆ ಅನ್ನಪೂರ್ಣ, ಶಿವಮ್ಮ, ದೇವಕ್ಕ, ಶಬನಾ, ಶಾರದಾ, ತಿಪ್ಪಮ್ಮ, ಲಾಲ್ ಬಿ ಹಾಗೂ ವಿವಿಧ ತಾಲೂಕುಗಳ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸಮಸ್ತ ಆ್ಯಪ್‌ನ ಸಮಸ್ಯೆ ತಕ್ಷಣ ಪರಿಹರಿಸದಿದ್ದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರನ್ನು ಸಂಘಟಿಸಿ ಜಿಲ್ಲಾಮಟ್ಟದ ಹೋರಾಟ ಹಮ್ಮಿಕೊಳ್ಳುವುದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.