ಮಾಗಡಿ: ರಾಜ್ಯದಲ್ಲಿ ವಕೀಲರ ಮೇಲೆ ನಿರಂತರ ಹಲ್ಲೆ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ, ಪ್ರಸ್ತುತ ಇರುವ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಸಮಗ್ರ ‘ವಕೀಲರ ರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ತಾಲೂಕು ವಕೀಲರ ಸಂಘದ ವತಿಯಿಂದ ತಹಸೀಲ್ದಾರ್ ಕೆ.ಆರ್.ರಂಜಿತ್ಗೆ ಮನವಿ ಪತ್ರ ಸಲ್ಲಿಸಲಾಯಿತು.

ವಕೀಲರ ಸಂಘ್ ಅಧ್ಯಕ್ಷ ಸುರೇಶ್ ಮಾತನಾಡಿ, ಕರ್ನಾಟಕ ಸರ್ಕಾರ 2024ರ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಸಹ ವಕೀಲರ ಮೇಲಿನ ದೌರ್ಜನ್ಯ ಹಾಗೂ ದೈಹಿಕ ಹಲ್ಲೆಗಳು ಅವ್ಯಾಹತವಾಗಿ ಮುಂದುವರಿಯುತ್ತಿವೆ. ಇತ್ತೀಚೆಗೆ ವಕೀಲರಾದ ಮಂಜುನಾಥ್ ಹಾಗೂ ಶ್ರೀರಾಮ್ ಬರ್ಬರ ಹತ್ಯೆ ಮತ್ತು ಗೌರಿಬಿದನೂರಿನ ವಕೀಲ ಶ್ರೀಗೌರಿ ವೆಂಕಟೇಶ್ ಮೇಲಿನ ಕೊಲೆಯತ್ನ ಪ್ರಕರಣಗಳನ್ನು ಪ್ರಸ್ತಾಪಿಸಿದ ಪದಾಧಿಕಾರಿಗಳು, ಹಾಲಿ ಕಾಯ್ದೆಯಿಂದ ವಕೀಲರಿಗೆ ಸೂಕ್ತ ರಕ್ಷಣೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಯದ ವಾತಾವರಣದಲ್ಲಿ ವಕೀಲ ವೃತ್ತಿ ನಿರ್ವಹಿಸುವುದು ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು ಕಷ್ಟಸಾಧ್ಯ, ನ್ಯಾಯವಾದಿಗಳು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಅನುವಾಗುವಂತೆ ಕಠಿಣ ಹಾಗೂ ಸಮಗ್ರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ ಎಂದರು.

ಈ ವೇಳೆ ವಕೀಲರ ಸಂಘದ ಕಾರ್ಯದರ್ಶಿ ಅನಿಲ್‌ಕುಮಾರ್, ಉಪಾಧ್ಯಕ್ಷ ರಾಜಯ್ಯ, ಜಂಟಿ ಕಾರ್ಯದರ್ಶಿ ಎಚ್. ಸಹನಾ ಪಂಡಿತ್, ಖಜಾಂಚಿ ವಿಜಯಕುಮಾರ್, ಕಾರ್ಯಕಾರಿ ಮಂಡಳಿ ಸದಸ್ಯರಾದ ಸುರೇಶ್, ಚಂದ್ರಶೇಖರಮೂರ್ತಿ, ಸಂಘದ ಪದಾಧಿಕಾರಿಗಳು ‌ಭಾಗವಹಿಸಿದ್ದರು.