ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಳದಿಂದ ಗ್ರಾಹಕರಿಂದ ಸಂಗ್ರಹವಾಗುತ್ತಿರುವ ಹೆಚ್ಚುವರಿ ಹಣ ಯಾರ ಖಾತೆಗೆ ಸೇರುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಿ, ಲೆಕ್ಕ ನೀಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನವೆಂಬರ್ 1 ರಿಂದ ರೈತರಿಗೆ ಲೀಟರ್‌ಗೆ 8 ರು. ಹೆಚ್ಚುವರಿ ಹಣ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಇದರಲ್ಲಿ 7 ರು. ರೈತರಿಗೆ ಹಾಗೂ 1 ರು. ಕೆಎಂಎಫ್‌ಗೆ ನೀಡುವುದಾಗಿ ತಿಳಿಸಿತ್ತು. ಆದರೆ, ಗ್ರಾಹಕರಿಂದ ಹಾಲು ಮತ್ತು ಮೊಸರಿನ ದರದಲ್ಲಿ 12 ರಿಂದ 14 ರು. ರವರೆಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಹಣ ರೈತರ ಖಾತೆಗೆ ಸೇರುತ್ತಿದೆಯೇ, ಕೆಎಂಎಫ್‌ಗೆ ಹೋಗುತ್ತಿದೆಯೇ ಅಥವಾ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಹಾಲಿನ ದರ ಹೆಚ್ಚಳದ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಹಾಕಿ ಸಂಗ್ರಹಿಸುವ ಹಣದ ಬಳಕೆಯ ಬಗ್ಗೆ ಪಾರದರ್ಶಕತೆ ಇರಬೇಕು. ಈ ಹಿಂದೆಯೂ ಹಾಲಿನ ದರ ಹೆಚ್ಚಳದ ಸಂದರ್ಭದಲ್ಲಿ ರೈತರಿಗೆ ಹಣ ನೀಡುವ ಭರವಸೆ ನೀಡಲಾಗಿತ್ತು. ಅದು ಸಮರ್ಪಕವಾಗಿ ಈಡೇರಿಲ್ಲ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ ಎಂಬ ಸರ್ಕಾರದ ಸಮರ್ಥನೆ ಸರಿಯಲ್ಲ. ತಮಿಳುನಾಡು, ಕೇರಳ, ಗೋವಾ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಾಲಿನ ದರ ಕಡಿಮೆ ಇದೆ. ಹಾಲಿನ ದರ ಏರಿಕೆಯ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕುವುದು ಸರಿಯಲ್ಲ ಎಂದರು.

ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಿದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಂಘಟನೆಯ ಮುಖಂಡರಾದ ರಘುನಾಥ ಪೈ, ಶಂಕರ ನಾಯ್ಕ, ಎಲ್. ಆದಿಶೇಷ, ಸಂಧ್ಯಾ ರಾಗಿಗುಡ್ಡ, ಎಸ್. ಪಿ. ಶಿವಣ್ಣ ಇದ್ದರು.