ಸಾರಾಂಶ
ಹುಣಸಗಿ : `ಪಟ್ಟಣದ 16 ವಾರ್ಡ್ ಗಳಲ್ಲಿ ಡೆಂಘೀ, ಮಲೇರಿಯಾಗಳಂತಹ ಸಾಂಕ್ರಾಮಿಕ ರೋಗಗಳ ಭೀತಿ ಹಿನ್ನೆಲೆಯಲ್ಲಿ ಸೊಳ್ಳೆಗಳ ಹಾವಳಿ ನಿಯಂತ್ರಿಸಲು ವಾರ್ಡಿನ ಮೂಲೆ ಮೂಲೆಗೂ ಫಾಗಿಂಗ್ ಮಾಡಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಿದ್ರಾಮೇಶ್ವರ ಶಖಾಪೂರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರತಿ ವಾರ್ಡಿನ ಚರಂಡಿಯನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಮತ್ತು ಮ್ಯಾಲಥಿಯಾನ ಪೌಡರ್ ಹಾಕಿ, ಟೆಮೆಪೋಸ್ ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಪಟ್ಟಣದ ನಿವಾಸಿಗಳು ಮನೆಯ ಸುತ್ತಮುತ್ತಲಿನ ಗುಂಡಿಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆದ್ದರಿಂದ ಮನೆಯ ಒಳಾಂಗಣದ ನೀರಿನ ತಾಣಗಳಾದ ಡ್ರಂ, ತೊಟ್ಟಿಗಳು ಮತ್ತು ಬ್ಯಾರಲ್‌ಗಳನ್ನು ವಾರಕ್ಕೆ ಮೂರು ಬಾರಿ ಸ್ವಚ್ಛವಾಗಿ ತೊಳೆದು ಒಣಗಿಸಿ ನೀರು ಶೇಖರಿಸಿಕೊಳ್ಳಬೇಕು.
ಹೊರಾಂಗಣ ನೀರಿನ ತಾಣಗಳಾದ ಹೂಕುಂಡಗಳು, ಒಡೆದ ಬಾಟಲ್, ಎಳೆ ನೀರಿನ ಬುರುಡೆ, ಎಸೆದ ಪಾಸ್ಟಿಕ್ ಹಾಗೂ ಮಡಿಕೆಗಳಲ್ಲಿ ನೀರು ನಿಲ್ಲದಂತೆ ಗಮನ ಹರಿಸಿ. ಇದರಿಂದ ಸೊಳ್ಳೆಗಳ ಉತ್ಪಾದನೆ ತಡೆಯುವುದಷ್ಟೇ ಅಲ್ಲದೇ ಸಾಂಕ್ರಾಮಿಕ ರೋಗವನ್ನು ತಡೆಯಬಹುದಾಗಿದೆ ಎಂದರು. ಸಾರ್ವಜನಿಕರು ಮನೆಯ ಮುಂದೆ ಕಸ ಚೆಲ್ಲುವುದು ಮತ್ತು ಹಸಿ ಕಸ ಹಾಕುವುದನ್ನು ಬಿಡಬೇಕು. ಮನೆಯ ಮುಂದೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸೊಳ್ಳೆಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮನೆಯ ಕಿಟಕಿಗಳನ್ನು ಮುಚ್ಚುವ ಮೂಲಕ ಸೊಳ್ಳೆಗಳು ಮನೆಯೊಳಗೆ ಬಾರದಂತೆ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರು ಸಹ ಪೌರ ಕಾರ್ಮಿಕರು ಹಾಗೂ ಪಟ್ಟಣ ಪಂಚಾಯ್ತಿ ಸಿಬ್ಬಂದಿಗೆ ಸಹಕಾರ ನೀಡುವ ಮೂಲಕ ಪಟ್ಟಣದಲ್ಲಿ ಡೆಂಘೀ, ಮಲೇರಿಯಾ ಹರಡದಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.