ವ್ಯಾಪಾರಿಗಳ ಬಳಿ ಹಣ ಪಡೆದು ವಂಚಿಸುತ್ತಿದ್ದವನ ಸೆರೆ

| Published : Aug 21 2024, 12:36 AM IST

ಸಾರಾಂಶ

ನಗದು ಪಡೆದು ಆನ್‌ಲೈನ್‌ ಮೂಲಕ ಹಣ ಮರಳಿಸುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ಖತರ್ನಾಕ್‌ ಮೋಸಗಾರನೊಬ್ಬನನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗದು ಪಡೆದು ಆನ್‌ಲೈನ್‌ ಮೂಲಕ ಹಣ ಮರಳಿಸುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ಖತರ್ನಾಕ್‌ ಮೋಸಗಾರನೊಬ್ಬನನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ರೋಹಿತ್ ಬಂಧಿತನಾಗಿದ್ದು, ಆರೋಪಿಯಿಂದ 25000 ರು. ನಗದು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಸ್ವಾತಂತ್ರೋತ್ಸವ ದಿನ ಕನ್ನಮಂಗಲ ಗೇಟ್ ಬಸ್ ನಿಲ್ದಾಣ ಸಮೀಪ ಶ್ರೀ ಬಸವೇಶ್ವರ ಎಂಟರ್‌ಪ್ರೈಸಸ್‌ ಮೊಬೈಲ್ ಮಾರಾಟ ಅಂಗಡಿ ಮಾಲಿಕ ಶಿವಬಸಪ್ಪ ಅವರಿಂದ 50000 ರು. ಹಣ ಪಡೆದು ಕಿಡಿಗೇಡಿ ವಂಚಿಸಿದ್ದ. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಧರ್ಮೇಗೌಡ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ.

ತನ್ನ ಕುಟುಂಬದ ಜತೆ ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದ ಬಿಕಾಂ ಪದವೀಧರ ರೋಹಿತ್‌, ಮೊದಲು ಕ್ಯಾಬ್ ಚಾಲಕನಾಗಿ ದುಡಿಯುತ್ತಿದ್ದ. ಬಳಿಕ ಸುಲಭವಾಗಿ ಹಣ ಸಂಪಾದನೆಗೆ ಆತ ಅಡ್ಡದಾರಿ ತುಳಿದು ಈಗ ಜೈಲು ಸೇರುವಂತಾಗಿದೆ. ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ರೋಹಿತ್ ತನ್ನ ವಂಚನೆ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹೇಗೆ ವಂಚನೆ?

ದಿನಸಿ ಹಾಗೂ ಮೊಬೈಲ್ ಮಾರಾಟ ಮಳಿಗೆ ಹೀಗೆ ವ್ಯಾಪಾರಿಗಳ ಬಳಿಗೆ ತೆರಳಿ ‘ನೀವು ನಗದು ಹಣ ನೀಡಿದರೆ ನಾನು ಆನ್‌ಲೈನ್‌ನಲ್ಲಿ ಹಣ ಮರಳಿಸುತ್ತೇನೆ. ತುರ್ತು ಹಣಬೇಕಿದೆ’ ಎಂದು ಗೊಗರೆಯುತ್ತಿದ್ದ. ಈತನ ವಿನಮ್ರತೆ ಮಾತುಗಳನ್ನು ನಂಬಿ ಹಣ ನೀಡಿದರೆ ಹಣೆ ಮೇಲೆ ಮೂರು ನಾಮ ಹಾಕುತ್ತಿದ್ದ. ನಗದು ಹಣ ಪಡೆದ ಬಳಿಕ ಫೋನ್‌ ಫೇ ಮೂಲಕ ಹಣ ಪಾವತಿಸಿರುವುದಾಗಿ ಹೇಳಿ ರೋಹಿತ್ ವಂಚಿಸುತ್ತಿದ್ದ. ಫೋನ್ ಫೇ ಬದಲಿಗೆ ನಕಲಿ ಆ್ಯಪ್ ಬಳಸಿ ಆನ್‌ಲೈನ್ ಮೂಲಕ ಹಣ ಜಮೆಯಾಗಿರುವಂತೆ ಸಂದೇಶ ತೋರಿಸಿ ಆತ ಟೋಪಿ ಹಾಕುತ್ತಿದ್ದ. ಅದೇ ರೀತಿ ಕನ್ನಮಂಗಲ ಬಸ್ ನಿಲ್ದಾಣದ ಬಳಿಕ ಬಸವೇಶ್ವರ ಎಂಟರ್‌ಪ್ರೈಸ್‌ ಅಂಗಡಿ ಮಾಲಿಕರಿಂದ ಆ.15 49,500 ರು. ನಗದು ನೀಡಿದರೆ 50 ಸಾವಿರ ರು. ಆನ್‌ಲೈನ್‌ ಮೂಲಕ ಹಣ ಪಾವತಿಸುವುದಾಗಿ ಹೇಳಿ ರೋಹಿತ್ ವಂಚಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಏಳೆಂಟು ತಿಂಗಳಿಂದ ಈ ವಂಚನೆ ಕೃತ್ಯವನ್ನೇ ಆತ ವೃತ್ತಿಯಾಗಿಸಿಕೊಂಡಿದ್ದಾನೆ. ಆದರೆ ಜನರಿಗೆ ಮೋಸ ಅರಿವಿಗೆ ಬಾರದ ಕಾರಣ ದೂರುಗಳು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.